ಸೂಕ್ಷ್ಮ ಕಣ್ಗಾವಲಿನಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ

ಬೆಂಗಳೂರು,ಮೇ.21- ಪಿಎಸ್‍ಐ, ಸಹಾಯಕ ಪ್ರಾಧ್ಯಾಪಕ ಪರೀಕ್ಷಾ ಅಕ್ರಮ ವ್ಯಾಪಕವಾಗಿ ನಡೆದಿರುವ ಹಿನ್ನಲೆಯಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಇಂದು ಸರ್ಕಾರ ಸೂಕ್ಷ್ಮ ಕಣ್ಗಾವಲಿನಲ್ಲಿ ನಡೆಸಿದೆ. ರಾಜಧಾನಿ ಬೆಂಗಳೂರಿನ 11 ಕೇಂದ್ರಗಳು ಸೇರಿದಂತೆ ರಾಜ್ಯದ 435 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಮತ್ತು ನಾಳೆ ಶಿಕ್ಷಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿದೆ.

ಇತ್ತಿಚೆಗೆ ರಾಜ್ಯದಲ್ಲಿ ಪಿಎಸ್‍ಐ ಮತ್ತು ಸಹಾಯಕ ಪ್ರಾದ್ಯಾಪಕರ ಪರೀಕ್ಷೆಗಳಲ್ಲಿ ಭಾರಿ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಓಎಂಆರ್ ಶೀಟ್ ತಿದ್ದಿರುವುದು ಸೇರಿದಂತೆ ಹಲವು ಅಕ್ರಮಗಳು ಬೆಳಕಿಗೆ ಬಂದ ಹಿನ್ನಲೆಯಲ್ಲಿಯಾವುದೆ ಜಿಲ್ಲೆಯಲ್ಲಿ ಅಕ್ರಮ ನಡೆಯದಂತೆ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಎಚ್ಚರಿಕೆಯಿಂದ ನಡೆಸಲಾಗುತ್ತಿದೆ.

ಪರೀಕ್ಷಾ ಹೊಣೆಗಾರಿಕೆಯನ್ನು ಆಯಾ ಜಿಲ್ಲಾಕಾರಿ, ಪೊಲೀಸ್‍ವರಿಷ್ಠಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ನೇತೃತ್ವದ ತ್ರಿಸದಸ್ಯ ಸಮಿತಿ ರಚಿಸಿದ್ದು, ಇಂದು ನಡೆದ ಪರೀಕ್ಷೆಯಲ್ಲಿ ಲೋಪವಾಗದಂತೆ ಭಾರಿ ಎಚ್ಚರಿಕೆ ವಹಿಸಲಾಗಿತ್ತು. 15 ಸಾವಿರ ಶಿಕ್ಷಕರ ನೇಮಕಕ್ಕೆ 1.05 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಂದು ಅಭ್ಯರ್ಥಿಗಳು ಪರೀಕ್ಷೆ ಬರೆದರು.

ಮೊಬೈಲ್ ಫೋನ್, ಬ್ಲೂಟೂಥ್, ಕೈಗಡಿಯಾರ, ಕ್ಯಾಲಿಕ್ಯುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕೊಂಡೊಯ್ಯಲು ನಿರ್ಬಂಧ ವಿಧಿಸಲಾಗಿತ್ತು. ಪ್ರತಿ ಹಂತದಲ್ಲೂ ತೀವ್ರ ತಪಾಸಣೆ ನಡೆಸಲಾಗಿತ್ತು. ಇಂದು ನಡೆದ ರೀತಿಯಲ್ಲೇ ನಾಳಿನ ಪರೀಕ್ಷೆ ಮೇಲೂ ತೀವ್ರ ನಿಗಾ ಇರಿಸಲಾಗುವುದು.