ಮಕ್ಕಳ ಶಿಕ್ಷಣಕ್ಕೆ ಕೊಳ್ಳಿ ಇಟ್ಟ ಕೊರೊನಾ..!

Social Share

ಬೆಂಗಳೂರು,ಫೆ.3-ಮಹಾಮಾರಿ ಕೊರೊನಾ ಕೇವಲ ಜನರ ಬದುಕಿನ ಜತೆ ಚೆಲ್ಲಾಟವಾಡಿಲ್ಲ. ಬದಲಿಗೆ ಶಾಲಾ ಮಕ್ಕಳ ಶಿಕ್ಷಣದ ಮೇಲೂ ಬರೆ ಎಳೆದಿದೆ. ಪ್ರಸಕ್ತ ಸಾಲಿನಲ್ಲಿ ಕೊರೊನಾ ನಂತರ ಶಾಲೆಯಿಂದ ಹೊರಗುಳಿದಿದ್ದ ಸಾವಿರಾರು ಮಕ್ಕಳಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ವಾಪಸ್ಸಾಗಿಲ್ಲ.
2021-22ನೇ ಸಾಲಿನಲ್ಲಿ 34,411 ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದರು. ಇವರಲ್ಲಿ 15,552 ಮಕ್ಕಳು ಮಾತ್ರ ಶಾಲೆಗಳಿಗೆ ಮರಳಿದ್ದು, ಉಳಿದ ಮಕ್ಕಳು ಇದುವರೆಗೂ ಶಾಲೆಗಳತ್ತ ಮುಖ ಮಾಡಿಲ್ಲ. ಹೀಗಾಗಿ ಶಾಲೆಗಳಿಂದ ಹೊರಗುಳಿದಿರುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಮತ್ತೆ ಶಾಲೆಗಳಿಗೆ ಕರೆತರುವುದು ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಅದರಲ್ಲೂ ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳು ಶಾಲೆಗಳಿಗೆ ಮರಳಿಲ್ಲ ಎಂದು ಅಂಕಿ ಅಂಶಗಳು ಸ್ಪಷ್ಟಪಡಿಸಿವೆ. ಈ ಎರಡು ಶೈಕ್ಷಣಿಕ ಜಿಲ್ಲೆಗಳಿಂದ 6608 ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ ಎಂದು ತಿಳಿದುಬಂದಿದೆ. ಶಾಲೆಗಳಿಂದ ಮಕ್ಕಳು ಹೊರಗುಳಿಯಲು ಪ್ರಮುಖವಾಗಿ 3 ಕಾರಣಗಳನ್ನು ಗುರುತಿಸಲಾಗಿದೆ.
ಮೊದಲನೆಯದಾಗಿ ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳಿಂದ ಶಾಲೆ ತೊರೆದಿದ್ದರೆ, ಕೆಲವರು ತಮ್ಮ ತಮ್ಮ ಊರುಗಳಿಗೆ ಹಿಂತಿರುಗಿದ್ದು, ಅಲ್ಲೆ ವ್ಯಾಸಂಗ ಮಾಡಲು ಟಿಸಿ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಕೆಲವರು ಕೊರೊನಾ ಮಹಾಮಾರಿಗೆ ಹೆದರಿ ತಮ್ಮ ತಮ್ಮ ಮನೆಗಳಲ್ಲೇ ಓದಲು ಶುರು ಮಾಡಿದ್ದಾರೆ. ಹೀಗಾಗಿ ಶಾಲೆ ತೊರೆಯುವವರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.
ಕೆಲ ದಿನಗಳಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಿತ್ತು. ಇದೀಗ ಮತ್ತೆ ಕಡಿಮೆಯಾಗುತ್ತಿದ್ದು, ಶಾಲೆಯಿಂದ ಹೊರಗುಳಿದಿರುವವರನ್ನು ಪತ್ತೆ ಹಚ್ಚಿ ಮತ್ತೆ ಶಾಲೆಗಳಿಗೆ ವಾಪಸ್ ಕರೆತರಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

Articles You Might Like

Share This Article