ವರುಣನ ರೌದ್ರತೆ, ತೀರದ ಸಂಕಷ್ಟ, ಶಾಲಾ ಕಾಲೇಜುಗಳಿಗೆ ರಜೆ

Social Share

ಬೆಂಗಳೂರು,ಜು.15- ಕೊಂಚ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಅಬ್ಬರಿಸ ತೊಡಗಿದೆ. ಕರಾವಳಿ, ಮಳೆನಾಡು ಭಾಗದಲ್ಲಿ ಮಳೆಯಿಂದ ಭಾರೀ ಪ್ರಮಾಣದ ಹಾನಿಯುಂಟಾಗಿ ಜನ ಸಂಕಷ್ಟಕ್ಕೀಡಾಗಿದ್ದಾರೆ. ಬೆಳಗಾವಿ, ರಾಯಚೂರು,
ಬೀದರ್‍ನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿ, ಬೀದರ್ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ನದಿ, ಹಳ್ಳಕೊಳ್ಳಗಳು ತುಂಬಿ ಮನೆ , ಜಮೀನು ಜಲಾವೃತಗೊಂಡಿವೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕೃಷ್ಣಾ ನದಿ ಮತ್ತೊಂದೆಡೆ ಭೀಮಾ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ. ತುಂಗಭದ್ರ ಡ್ಯಾಂ ಭರ್ತಿಯಾಗಿ ಸೇತುವೆಗಳು ಮುಳುಗಡೆಯಾಗಿವೆ. ಜಲಾಶಯದಿಂದ 25 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತಿರುವುದರಿಂದ ಗಂಗಾವತಿಯ ಚಿಕ್ಕಜಂತ್ಕಲ್ ಸೇತುವೆ ಜಲಾವೃತವಾಗಿದ್ದು, ವಾಹನ ಸಂಚಾರ ನಿಷೇಧ ಮಾಡಲಾಗಿದೆ.

ಅಕ್ಕಪಕ್ಕದ ಜಮೀನುಗಳು ಜಲಾವೃತಗೊಂಡಿದ್ದು, ಬೆಳೆ, ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿವೆ. ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಕೃಷ್ಣ,ದೂದ್ ಗಂಗಾ ಒಳಹರಿವು ಹೆಚ್ಚಾಗಿದ್ದು, ನದಿಪಾತ್ರದ ನಿವಾಸಿಗಳಲ್ಲಿ ಆತಂಕ ಎದುರಾಗಿದೆ.

ಜಮೀನುಗಳಿಗೆ ನೀರು ನುಗ್ಗಿ, ಅರಿಶಿಣ, ಶೇಂಗಾ ಬೆಳೆ ಸಂಪೂರ್ಣ ನಾಶವಾಗಿದೆ. ಮಂಡ್ಯದಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ನದಿಯುದ್ದಕ್ಕೂ ಸೇತುವೆಗಳು ಜಲಾವೃತಗೊಂಡಿವೆ. ಉತ್ತರ ಕರ್ನಾಟಕ ಭಾಗದ ಧಾರವಾಡದಲ್ಲೂ ಮಳೆ ಹೆಚ್ಚಾಗಿ ಬೇಡ್ತಿಹಳ್ಳ ತುಂಬಿ ಹರಿಯುತ್ತಿದೆ.

ಅಂಬಳಿ ಕೊಪ್ಪ, ಡೊಂಬರಕೊಪ್ಪ ಸೇತುವೆ ಮುಳುಗಡೆಯಾಗಿ ಗ್ರಾಮಗಳ ಮಧ್ಯದ ಸಂಪರ್ಕ ಬಂದ್ ಆಗಿದೆ. ದಾವಣಗೆರೆ, ಹೊನ್ನಾಳಿ ಭಾಗದಲ್ಲೂ ಮಳೆಯ ಆರ್ಭಟ ಜೋರಾಗಿದೆ. ಹೊನ್ನಾಳಿ, ಹರಿಹರಿದಲ್ಲಿ ಸಂತ್ರಸ್ತರಿಗಾಗಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.

ಬಳ್ಳಾರಿ ನಾಲೆ ತುಂಬಿ ಹರಿಯುತ್ತಿದ್ದು, ಅಕ್ಕಪಕ್ಕದ ಬಡಾವಣೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಕಡೂರಿನ ಪ್ರಸಿದ್ದ ಮದಗದ ಕೆರೆ ಕೋಡಿ ಬಿದ್ದಿದೆ. ಕೆರೆ ಪಾತ್ರದ 60 ಹಳ್ಳಿಗಳಿಗೆ ಜಲ ಕಂಟಕ ಎದುರಾಗಿದ್ದು, ಜನ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ.

ಉಡುಪಿ, ಬೈಂದೂರಿನಲ್ಲೂ ಕೂಡ ಮಳೆ ಮುಂದುವರೆದಿದ್ದು, ಹಳ್ಳಕೊಳ್ಳ, ಹೊಳೆಗಳು ತುಂಬಿ ಹರಿಯುತ್ತಿವೆ. ಸಣ್ಣಪುಟ್ಟ ಸೇತುವೆಗಳು ಕಾಣದಂತಾಗಿ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ದು, ಕೃಷಿಕರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.

Articles You Might Like

Share This Article