ಶಾಲೆಗಳಲ್ಲಿ ಚಿಣ್ಣರ ಕಲರವ ಆರಂಭ

ಬೆಂಗಳೂರು,ಮೇ16- ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನರಾರಂಭಗೊಂಡಿವೆ. ಕೋವಿಡ್ ಕಾರಣದಿಂದಾಗಿ ಮನೆಯಲ್ಲಿ ಹೆಚ್ಚು ಕಾಲ ಕಳೆದಿದ್ದ ಮಕ್ಕಳು ಶಾಲೆ ಆರಂಭವಾಗುತ್ತಿದ್ದಂತೆ ಖುಷಿ ಖುಷಿಯಿಂದಲೇ ಶಾಲೆಗಳತ್ತ ಹೆಜ್ಜೆ ಹಾಕಿದರು. ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳನ್ನು ಶಾಲೆಗೆ ಬರುವಂತೆ ಆಕರ್ಷಿಸುವುದಕ್ಕಾಗಿ ಬೇಸಿಗೆ ರಜಾ ಪೂರ್ಣಗೊಳ್ಳುವ 15 ದಿನ ಮುನ್ನವೇ ಸರ್ಕಾರ ಶಾಲೆಗಳನ್ನು ಆರಂಭಿಸಿದ್ದು, ಸರ್ಕಾರಿ ಅನುದಾನಿತ, ಅನುದಾನ ರಹಿತ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಶಿಕ್ಷಕರು ಆದರಿಂದ ಬರಮಾಡಿಕೊಂಡರು. ಕೆಲವೆಡೆ ಶಾಲೆಗಳನ್ನು ತಳಿರು-ತೋರಣಗಳಿಂದ ಶೃಂಗರಿಸಲಾಗಿತ್ತು.

ಕಳೆದ ಎರಡು ವರ್ಷಗಳಿಂದ ಕೋವಿಡ್‍ನಿಂದ ಕಂಗೆಟ್ಟಿದ್ದ ಶಾಲೆಗಳನ್ನೆಲ್ಲ ಸುಣ್ಣಬಣ್ಣ ಹೊಡೆದು ಅಲಂಕರಿಸಲಾಗಿತ್ತು.
ಬೆಳಗ್ಗೆ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಸಿಹಿ, ಗಿಫ್ಟ್ ನೀಡಿ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು.

ಕೋವಿಡ್ ಕಾರಣದ ಹಿನ್ನೆಲೆಯಲ್ಲಿ ಇಷ್ಟು ದಿನಗಳ ಕಾಲ ಕ್ಷೀರಭಾಗ್ಯ ಮತ್ತು ಮಧ್ಯಾಹ್ನ ಬಿಸಿಯೂಟಕ್ಕೆ ಕತ್ತರಿ ಬಿದ್ದಿತ್ತು. ಅದರ ಬದಲಾಗಿ ಮಕ್ಕಳಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿತ್ತು. ಆದರೆ ಇಂದಿನಿಂದಲೇ ಬಿಸಿಯೂಟ ಶಾಲೆಗಳಲ್ಲಿ ಹಾಲನ್ನು ವಿತರಿಸಲು ಸೂಚಿಸಲಾಗಿದೆ.
ಈ ಹದಿನೈದು ದಿನಗಳು ಕಲಿಕಾ ಚೇತರಿಕೆ ವಿಶೇಷ ಕಾರ್ಯಕ್ರಮ ಕೂಡ ಶುರುವಾಗಿದೆ.

ವಿವಿಧೆಡೆ ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರೇ ಮುಂದೆ ನಿಂತು ಶಾಲೆಗಳನ್ನು ಶುಚಿಗೊಳಿಸಿ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದದ್ದು ಕಂಡುಬಂತು.

ಮತ್ತೆ ಕೆಲವೆಡೆ ಶಿಕ್ಷಕರೇ ಕಸಗುಡಿಸಿ, ಶ್ರಮದಾನ ಮಾಡಿ ಶಾಲೆಗಳನ್ನು ಸಿಂಗರಿಸಿ ಮಕ್ಕಳನ್ನು ಬರಮಾಡಿಕೊಂಡಿದ್ದು ಕಂಡುಬಂತು. ಎರಡು ವಾರಗಳ ಕಾಲ ಮಳೆಬಿಲ್ಲು ಎಂಬ ವಿನೂತನ ಕಾರ್ಯಕ್ರಮ ರೂಪಿಸಲಾಗಿದ್ದು, ಕಲಿಕಾ ಚೇತರಿಕೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ.
ಬಳಿಕ ಕ್ರಮಬದ್ಧವಾಗಿ ಪಾಠಪ್ರವಚನಗಳು ಸಾಗಲಿವೆ.

ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಿಗೆ ಪ್ರವೇಶಾತಿ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಆನ್‍ಲೈನ್ ಶಿಕ್ಷಣ, ಅತಿಯಾದ ಶುಲ್ಕ ವನ್ನು ಭರಿಸಲಾಗದ ಪೆÇೀಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಸರ್ಕಾರಿ ಶಾಲೆಗೆ ಸೇರಿಸುತ್ತಿರುವುದು ಕಂಡುಬಂತು.

ಮಂಡ್ಯ, ಚಿಕ್ಕಬಳ್ಳಾಪುರ, ರಾಯಚೂರು, ಗುಲ್ಬರ್ಗ, ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಬಹುತೇಕ ಜಿಲ್ಲೆಗಳಲ್ಲಿ ಖಾಸಗಿ ಶಾಲೆಗಳಿಂತ ಸರ್ಕಾರಿ ಶಾಲೆಗಳಲ್ಲೇ ಹೆಚ್ಚಾಗಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲಾಗುತ್ತಿದೆ. ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಬಾರದು ಎಂಬ ಹಿನ್ನೆಲೆಯಲ್ಲಿ ಸರ್ಕಾರ ವಿದ್ಯಾಗಮ ಮತ್ತಿತರ ಶೈಕ್ಷಣಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕಾರ್ಯಕ್ರಮ ರೂಪಿಸಿತ್ತು.

ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿಯೇ ಈಗ ಬೇಸಿಗೆ ರಜಾ ಮುಗಿಯುವ ಮುಂಚೆಯೇ ಆರಂಭವಾಗಿರುವ ಶಾಲೆಗಳಿಗೆ ಮಕ್ಕಳು ಸಂತಸದಿಂದಲೇ ಆಗಮಿಸಿದ್ದಾರೆ.