ನಾಳೆಯಿಂದ 1ರಿಂದ 5ನೇ ತರಗತಿ ಶಾಲೆಗಳು ಆರಂಭ

Spread the love

ಬೆಂಗಳೂರು,ಅ.24-ನಾಳೆಯಿಂದ 1ರಿಂದ 5ನೇ ತರಗತಿಯವರೆಗೆ ಶಾಲೆಗಳು ಆರಂಭಗೊಳ್ಳಲಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಕೊರೊನಾ ಹಿನ್ನೆಲೆಯಲ್ಲಿ ಬರೋಬ್ಬರಿ 18 ತಿಂಗಳ ಕಾಲ ಶಾಲೆಗಳು ಮುಚ್ಚಲ್ಪಟ್ಟಿದ್ದು, ನಾಳೆಯಿಂದ ಶಾಲೆಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ 1ರಿಂದ 5ರವರೆಗೆ ತರಗತಿಗಳನ್ನು ಆರಂಭಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿವೆ.

ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ವಿವಿಧ ಶಾಲೆಗಳಲ್ಲಿ ತಳಿರುತೋರಣ, ಸ್ವಾಗತ ಕಮಾನುಗಳನ್ನು ಹಾಕಿ ಶೃಂಗರಿಸಲಾಗಿದೆ.
ಸೋಮವಾರದಿಂದ ಶುಕ್ರವಾರದವರೆಗೆ 5 ದಿನಗಳ ಕಾಲ ಅರ್ಧ ದಿನ ಮಾತ್ರ ಶಾಲೆಗಳು ನಡೆಯುತ್ತವೆ. ಕೊಠಡಿಯೊಂದರಲ್ಲಿ 20 ವಿದ್ಯಾರ್ಥಿಗಳು ಕೂರಲು ಅವಕಾಶ ಕಲ್ಪಿಸಲಾಗಿದೆ.

ಶನಿವಾರ ಮತ್ತು ಭಾನುವಾರ ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್‍ನಿಂದ ಸ್ವಚ್ಚಗೊಳಿಸಬೇಕು. ಎರಡು ಕೋವಿಡ್ ಲಸಿಕೆ ಪಡೆದ ಶಿಕ್ಷಕರು ಮಾತ್ರ ಶಾಲೆಗೆ ಹಾಜರಾಗಿ ಮಕ್ಕಳಿಗೆ ಬೋಧನೆ ಮಾಡುವಂತೆ ಸೇರಿದಂತೆ ಹಲವಾರು ಮಾರ್ಗಸೂಚಿಗಳನ್ನು ಸರ್ಕಾರ ರೂಪಿಸಿದ್ದು, ಇದರ ಅನ್ವಯ ರಾಜ್ಯಾದ್ಯಂತ ಎಲ್ಲ ಕಡೆ ಶಾಲೆಗಳನ್ನು ಪ್ರಾರಂಭವಾಗಲಿವೆ.

ಈಗಾಗಲೇ ಸ್ನಾತಕೋತ್ತರ, ಪದವಿ, ಪದವಿಪೂರ್ವ ಹಾಗೂ 6ರಿಂದ 8ನೇ ತರಗತಿವರೆಗಿನ ಶಾಲೆಗಳು ಪ್ರಾರಂಭವಾಗಿದ್ದು, ಯಶಸ್ವಿಯಾಗಿ ನಡೆಯುತ್ತಿವೆ.
ಶಿಕ್ಷಣ ತಜ್ಞರು, ಆರೋಗ್ಯ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಗಳನ್ನು 25ರಿಂದ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿತ್ತು.

ನಾಳೆಯಿಂದ ಅರ್ಧ ದಿನ ಮಾತ್ರ ಶಾಲೆಗಳು ನಡೆಯಲಿದ್ದು, ಸಾಧಕ-ಬಾಧಕಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಪೂರ್ತಿ ದಿನ ಶಾಲೆ ನಡೆಸುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.

Sri Raghav

Admin