ಬೆಂಗಳೂರು,ಜ.31-ಕೋವಿಡ್ 3ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಸ್ಥಗಿತಗೊಂಡಿದ್ದ ಶಾಲಾ-ಕಾಲೇಜುಗಳು ಇಂದಿನಿಂದ ಪುನರಾರಂಭಗೊಂಡಿದ್ದು ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕಿದರು. 24 ದಿನಗಳ ಬಳಿಕ ಕೋವಿಡ್ ನಿಯಮದಂತೆ ಶಾಲೆಗಳು ಆರಂಭವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಇಂದು ಬೆಳಗ್ಗೆ ಶಾಲೆಗಳಿಗೆ ಬಿಟ್ಟು ಬರುತ್ತಿದ್ದ ದೃಶ್ಯ ಕಂಡುಬಂತು.
ಕೋವಿಡ್ ಸಾಂಕ್ರಾಮಿಕ ರೋಗ ವೇಗವಾಗಿ ಹರಡುತ್ತಿದೆ ಎಂಬ ಕಾರಣಕ್ಕೆ ಬೆಂಗಳೂರು ನಗರ, ಗ್ರಾಮೀಣ ಪ್ರದೇಶದ ಶಾಲೆಗಳ ಭೌತಿಕ ತರಗತಿಗಳನ್ನು ನಿಲ್ಲಿಸಿ ಆನ್‍ಲೈನ್ ಶಿಕ್ಷಣ ನೀಡಬೇಕೆಂದು ಸರ್ಕಾರ ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಹೊರತುಪಡಿಸಿ ಎಲ್ಲ ಶಾಲೆಗಳು ರದ್ದಾಗಿದ್ದವು. ಇದೀಗ 3ನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆ ಇರುವುದರಿಂದ 1ರಿಂದ 9ನೇ ತರಗತಿವರೆಗಿನ ಶಾಲೆಗಳ ಪುನರಾರಂಭಕ್ಕೆ ಸರ್ಕಾರ ಆದೇಶ ನೀಡಿದ್ದು, ಎಂದಿನಂತೆ ಶಾಲೆಗಳು ಪ್ರಾರಂಭವಾದವು.
10, 11, 12ನೇ ತರಗತಿಗಳು ಈಗಾಗಲೇ ನಡೆಯುತ್ತಿದ್ದು, ಆಯಾ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಆದೇಶದ ಪ್ರಕಾರ ಶಾಲೆಗಳು ಕಾರ್ಯ ನಿರ್ವಹಿಸಬೇಕೆಂದು ಸೂಚಿಸಲಾಗಿದೆ. ಶಾಲೆಯ ಆವರಣದಲ್ಲಿ ಮೊದಲಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ವಿದ್ಯಾರ್ಥಿಗಳನ್ನು ಕೊಠಡಿಯೊಳಗೆ ಬಿಡಲಾಗುತ್ತಿದೆ.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮಾಡಿಕೊಂಡು ಶಾಲೆಗಳಿಗೆ ಆಗಮಿಸುತ್ತಿದ್ದ ದೃಶ್ಯ ಕಂಡುಬಂತು. ಶಿಕ್ಷಕರಿಗೆ ಜಾಗೃತಿ ಮೂಡಿಸಿ ನಂತರ ಪಾಠಪ್ರವಚನ ಮುಂದುವರೆಸಲಾಯಿತು.
ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಪೂರ್ವಭಾವಿ ಪರೀಕ್ಷಾ ತಯಾರಿ ನಡೆದಿದೆ. 8, 9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಗೂ ಸಿದ್ದತೆಗಳು ನಡೆದಿದ್ದು, ನಿಗದಿತ ಅವಯಲ್ಲಿ ಪಠ್ಯಗಳನ್ನು ಮುಗಿಸಲು ಸೂಚನೆ ನೀಡಲಾಗಿದೆ.
ಮತ್ತೆ ಸಾಂಕ್ರಾಮಿಕ ಭೀತಿ ಎದುರಾಗದಿದ್ದರೆ ನಿರ್ಭೀತಿಯಿಂದ ಶಾಲಾಕಾಲೇಜುಗಳು ಎಂದಿನಂತೆ ನಡೆಯಲಿವೆ.
