ಒಂದೇ ಸ್ಕೂಟರ್ ಮೇಲೆ 70 ಕೇಸ್..!

ಬೆಂಗಳೂರು, ಡಿ.14- ಪೊಲೀಸರು ಇಲ್ಲ ಎಂಬ ಕಾರಣಕ್ಕಾಗಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಮನಸೋ ಇಚ್ಛೆ ನಡೆದುಕೊಂಡೀರಿ ಜೋಕೆ ! ಬೆಂಗಳೂರಿನ ಹಾದಿಬೀದಿಯಲ್ಲೂ ಪೊಲೀಸ್ ಕಣ್ಣುಗಳಿವೆ.  ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಉದಾಸೀನದಿಂದ ಓಡಾಡುತ್ತಿದ್ದ ದ್ವಿಚಕ್ರ ಸವಾರನ ವಾಹನದ ಮೇಲೆ  ಸುಮಾರು 70 ಕೇಸುಗಳು ದಾಖಲಾಗಿದ್ದು, ಬೆಂಗಳೂರು ನಗರ ಸಂಚಾರಿ ಪೊಲೀಸರು 15 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇದು ಅಪರೂಪದ ಘಟನೆ ಎಂದೇ ಹೇಳಬಹುದು. ಗುರುವಾರ ವಿಶೇಷ ಕಾರ್ಯಾಚರಣೆಯಲ್ಲಿ ತೊಡಗಿದ್ದ ರಾಜಾಜಿನಗರ ಸಂಚಾರಿ ಪೊಲೀಸರಿಗೆ ಮಹಾಲಕ್ಷ್ಮಿ ಲೇಔಟ್‍ನ ಶಂಕರನಗರ ಬಸ್ ನಿಲ್ದಾಣದ ಬಳಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ಮಂಜು ಎಂಬಾತ ಸಿಕ್ಕಿಬಿದ್ದಿದ್ದಾನೆ. ಆತನನ್ನು ತಡೆದು ನಿಲ್ಲಿಸಿ ವಾಹನದ ನೋಂದಣಿ ಸಂಖ್ಯೆ ಕೆಎ41-ಇಜಿ6244 ತಪಾಸಣೆ ಮಾಡಿದಾಗ ಕಳೆದ ಒಂದು ವರ್ಷದಿಂದ ಸುಮಾರು 70 ಕೇಸುಗಳು ದಾಖಲಾಗಿರುವುದು ತಿಳಿದುಬಂದಿದೆ.

ಜೊತೆಗೆ ಆ ಕ್ಷಣದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ಕೇಸು ಸೇರಿ 71 ಪ್ರಕರಣಗಳು ರಾಜಾಜಿನಗರ ಸಂಚಾರಿ ವಿಭಾಗದ ಎಎಸ್‍ಐ ರವೀಂದ್ರ ದಾಖಲಿಸಿದ್ದಾರೆ. ಒಟ್ಟು ದಂಡದ ಪ್ರಮಾಣ 15,400 ರೂ.ಗಳಾಗಿವೆ. ದಂಡ ಹಾಕಿದ ರಸೀದಿಯೇ ಹನುಮಂತನ ಬಾಲದಂತೆ ಮಾರುದ್ದ ಪ್ರಿಂಟ್ ಬಂದಿದೆ. ಅದರಲ್ಲಿ ಬಹುತೇಕ ಹೆಲ್ಮೆಟ್ ರಹಿತ ಚಾಲನೆ ಮಾಡಿದ್ದು, ಮೂರು ಜನ ಏಕಕಾಲಕ್ಕೆ ಸವಾರಿ ಮಾಡಿರುವುದು, ಸಿಗ್ನಲ್ ಜಂಪ್ ಸೇರಿದಂತೆ ನಾನಾ ರೀತಿಯ ಅಪರಾಧಗಳು ದಾಖಲಾಗಿವೆ.

ಸಾಮಾನ್ಯವಾಗಿ ಪೊಲೀಸರಿಲ್ಲ ಎಂಬ ಕಾರಣಕ್ಕಾಗಿ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ಸಂಚರಿಸಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಆದರೆ ಪೊಲೀಸರು ಎಲ್ಲೆಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದು, ಅವು ಮನುಷ್ಯರಿಗಿಂತಲೂ ಹೆಚ್ಚಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದನ್ನು ಈ ಕ್ಯಾಮೆರಾಗಳು ಫೋಟೋ ಹಿಡಿದು ಕಂಟ್ರೋಲ್ ರೂಂಗೆ ಕಳುಹಿಸುತ್ತಿದ್ದು, ಅಲ್ಲಿಯೇ ಕೇಸುಗಳು ದಾಖಲಾಗುತ್ತಿವೆ.

ತ್ರಿಬ್ಬಲ್ ರೈಡಿಂಗ್ ವೇಳೆ ಪೊಲೀಸರು ನೋಡಿಲ್ಲ ಎಂದು ಖುಷಿಯಾಗಿ ಗಾಡಿ ಓಡಿಸಬಹುದು. ಆದರೆ ಯಾವುದೋ ಮೂಲೆಯಲ್ಲಿರುವ ಕ್ಯಾಮೆರಾ ನಿಮ್ಮ ತಪ್ಪನ್ನು ಫೋಟೋ ಹಿಡಿದು ದಾಖಲಿಸಿರುತ್ತದೆ ಎಂಬುದಕ್ಕೆ ಈ ಪ್ರಕರಣ ಸ್ಪಷ್ಟ ಉದಾಹರಣೆ. ಒಂದು ಒಂದು ದಿನ ಸಿಕ್ಕಿ ಬಿದ್ದರೆ ಈ ರೀತಿ ವಾಹನದ ಮೌಲ್ಯಕ್ಕಿಂತ ದುಬಾರಿ ದಂಡ ತೆತ್ತು ಪರಿತಪಿಸಬೇಕಾಗಬಹುದು. ಹಾಗಾಗಿ ವಾಹನ ಸವಾರರೇ ಎಚ್ಚರಿಕೆಯಿಂದಿರಿ, ಸಂಚಾರಿ ನಿಯಮಗಳನ್ನು ಪಾಲಿಸಿ.