ಬೆಂಗಳೂರು, ಫೆ.7- ಕೆಪಿಎಸ್ ಶಾಲೆಗಳಲ್ಲಿ ಆ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿಸಿರುವ ತಿದ್ದುಪಡಿ ಆದೇಶ ನಿಯಮ ಬಾಹಿರವಾಗಿದ್ದು, ಕೂಡಲೇ ಅದನ್ನು ಹಿಂಪಡೆಯಬೇಕು ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾಪೋಷಕರಾದ ಪಿ.ನಿರಂಜನಾರಾಧ್ಯ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪೂರ್ವ ಪ್ರಾಥಮಿಕದಿಂದ 12 ನೇ ತರಗತಿಯವರೆಗೆ ಗುಣಾತ್ಮಕ ಶಿಕ್ಷಣ ಒದಗಿಸಲು ಪ್ರಾರಂಭಿಸಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (ಕೆಪಿಎಸ್) ಈ ಹಿಂದೆ ಶಿಕ್ಷಣ ಹಕ್ಕು ಕಾಯಿದೆ ಹಾಗು ನಿಯಮಗಳ ಅನ್ವಯ ಪಾಲಕರಿಂದ ಆಯ್ಕೆಯಾದ ಪೋಷಕ ಪ್ರತಿನಿಯೊಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ 2021 ಅಕ್ಟೋಬರ್ 26ರ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿತ್ತು.
ಈ ತೀರ್ಮಾನ ನಿಯಮ ಮತ್ತು ಸುತ್ತೋಲೆಗಳ ಅನ್ವಯ ಕ್ರಮಬದ್ಧವಾಗಿತ್ತು. ಅಧ್ಯಕ್ಷರ ಜೊತೆಗೆ ಕ್ಷೇತ್ರದ ಶಾಸಕರು ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಇರುವಂತೆ ತಿಳಿಸಲಾಗಿತ್ತು. ಶಾಲೆಗಳ ಅಭಿವೃದ್ಧಿಗೆ 2 ಕೋಟಿ ರೂ. ಹಣ ಮಂಜೂರಾದ ಸುದ್ದಿ ಕೇಳಿದಾಕ್ಷಣ ಶಾಸಕರು ತಮ್ಮ ಅಧಿಕಾರ ದುರಪಯೋಗ ಪಡಿಸಿಕೊಂಡು ಸರಕಾರದ ಮೇಲೆ ಒತ್ತಡ ಹಾಕಿ, ಕ್ರಮಬದ್ಧವಾದ ಹಿಂದಿನ ತೀರ್ಮಾನವನ್ನು ಅಸಿಂಧುಗೊಳಿಸಿದ್ದಾರೆ.
2022ರ ಜನವರಿ 30ರಂದು ಹೊಸ ಆದೇಶ ಹೊರಡಿಸಲಾಗಿದ್ದು, ಅದರಲ್ಲಿ ಶಾಸಕರೇ ಸಮಿತಿಗಳಿಗೆ ಅಧ್ಯಕ್ಷರಾಗ ಬೇಕು ಎಂದು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದು ಅತ್ಯಂತ ಖಂಡನೀಯ. ಕಾನೂನಿನ ಅನ್ವಯ ಪೋಷಕರು ಅಧ್ಯಕ್ಷರಾಗ ಬೇಕಾದ ಜಾಗದಲ್ಲಿ ಕಾನೂನು ಬಾಹಿರವಾಗಿ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಕೇವಲ ಅಲ್ಲಿರುವ ಅನುದಾನದಲ್ಲಿ ಪರ್ಸೆಂಟೆಜ್ ಪಡೆಯಲು ಮಾತ್ರ. ಶಾಸಕರನ್ನು ಶಾಲೆಯಲ್ಲಿ ಅಧ್ಯಕ್ಷರನ್ನಾಗಿ ಕೂರಿಸುವ ಈ ರ್ಡೀ ಆದೇಶ ಭ್ರಷ್ಟಾಚಾರಕ್ಕೆ ದಾರಿಮಾಡಿ , ಪಕ್ಷ ರಾಜಕಾರಣಕ್ಕೆ ಎಡೆಮಾಡಿಕೊಟ್ಟು ಎಸ್‍ಡಿಎಂಸಿಗಳ ರಚನೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ ಎಂದು ಆತಂಕ ವ್ಯಕ್ತ ಪಡಿಸುತ್ತದೆ.
ಶಾಸಕರ ಹಿಂಬಾಗಿಲ ಪ್ರವೇಶ ಸಮುದಾಯದ, ಪೋಷಕರ ಸಹಭಾಗಿತ್ವವನ್ನು ನೆಪಮಾತ್ರ ಹಾಗು ನಾಮಕಾವಸ್ತೆಯಾಗಿಸುತ್ತದೆ. ಹಣ ಬರುವ ಕಡೆಗಳಲ್ಲಿ ರಾಜಕಾರಣಿಗಳು ಇರಬೇಕು ಎಂಬ ಆದೇಶ ಮಾಡುವುದು ಲಾಭಕ್ಕಾಗಿ ಮತ್ತು ದುರುದ್ದೇಶಪೂರಿತ ಎಂಬುದು ಈ ಹಿಂದಿನ ಅನುಭವಗಳಿಂದ ಮನವರಿಕೆಯಾಗಿದೆ ಎಂದು ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ತಮ್ಮ ಹಕ್ಕನ್ನು ಕಸಿದರೂ ಮುಗ್ದ ಪೋಷಕರು ಶಾಸಕರಿಗೆ ಹೆದರಿ ಪ್ರತಿಭಟಿಸಲಾಗದೆ ಅಸಹಾಯಕರಾಗಿದ್ದಾರೆ. ಈ ಕಾನೂನು ಬಾಹಿರ ಆದೇಶ ವನ್ನು ಕೂಡಲೇ ಹಿಂದಕ್ಕೆ ಪಡೆದು ಅಕ್ಟೋಬರ್ 26ರ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ವೇದಿಕೆ ಸರಕಾರವನ್ನು ಆಗ್ರಹಿಸಲಿದೆ ಎಂದು ಹೇಳಿದ್ದಾರೆ.
