ಹಿಜಾಬ್ ವಿವಾದದ ಹಿಂದೆ ಬಿಜೆಪಿ-ಎಸ್‍ಡಿಪಿಐ ಕೈವಾಡ : ಡಿಕೆಶಿ ಆರೋಪ

Social Share

ಬೆಂಗಳೂರು, ಫೆ.20- ಹಿಜಾಬ್ ವಿಷಯದಲ್ಲಿ ರಾಜ್ಯ ಸರ್ಕಾರ ಎಸ್‍ಡಿಪಿಐ ಜೊತೆ ಸೇರಿ ರಾಜ್ಯದಲ್ಲಿ ಅಶಾಂತಿಯ ಬೀಜ ಬಿತ್ತಲು ಹುನ್ನಾರ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ವಿಧಾನಮಂಡಲದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಶಾಸಕರ ಜೊತೆ ಇಂದು ಬೆಳಗ್ಗೆ ವಿಧಾನಸೌಧದ ಆವರಣದಲ್ಲಿ ವಾಯು ವಿಹಾರ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಷಯದಲ್ಲಿ ಹೈಕೋರ್ಟ್ ಆದೇಶಕ್ಕೆ ಸೀಮಿತವಾಗಿ ಸರ್ಕಾರ ನಡೆದುಕೊಳ್ಳಬೇಕಿತ್ತು.
ಅತಿರೇಖದ ವರ್ತನೆ ಪ್ರದರ್ಶನ ಮಾಡುತ್ತಿದೆ. ಫೆ.5ರಂದು ಆದೇಶ ಹೊರಡಿಸುವ ಅಗತ್ಯವೇ ಇರಲಿಲ್ಲ. ಶಾಲಾ ಕಾಲೇಜು, ಆಡಳಿತ ಮಂಡಳಿ
ಮತ್ತು ವಿದ್ಯಾರ್ಥಿಗಳಿಗೆ ಹಿಜಾಬ್ ವಿಷಯವನ್ನು ಬಿಟ್ಟು ಬಿಡುವ ಬದಲು ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಎಸ್‍ಡಿಪಿಐ ಜೊತೆ ಸೇರಿ ಸರ್ಕಾರವೇ ಅಶಾಂತಿಯ ಬೀಜ ಬಿತ್ತುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ರೈತರ ಮೇಲೆ, ವಿದ್ಯಾರ್ಥಿಗಳ ಮೇಲೆ ಕೇಸು ಹಾಕಲಾಗುತ್ತಿದೆ. ಸರ್ಕಾರಕ್ಕೆ ಇದು ಕೊನೆಗಾಲ. ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದು ಅಕ್ಷಮ್ಯ, ಈ ವಿಷಯ ನಾಳೆ ದೊಡ್ಡ ಚಳವಳಿಯಾಗಿ ಹುಟ್ಟಿಕೊಳ್ಳುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಚಿವ ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಿ ನಾವು ವಿಧಾನಮಂಡಲದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನಿನ್ನೆ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ವಿಧಾನಸಭೆಗೆ ಬಂದು ಎಲ್ಲಾ ಧರಣಿ ನಿರತ ಎಲ್ಲಾ ಶಾಸಕರನ್ನು ಭೇಟಿ ಮಾಡಿ, ಬೆಂಬಲ ವ್ಯಕ್ತ ಪಡಿಸಿದರು.
ತಮಗೆ ಬೇರೆ ಬೇರೆ ಪಕ್ಷಗಳಿಂದ ರಾಜಕೀಯ ನಾಯಕರು, ಸಂಸದರು ಕರೆ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರು ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಖರ್ಗೆ ತಿಳಿಸಿದರು. ಇನ್ನೂ ವಿದೇಶದಲ್ಲಿರುವ ಹಲವು ಮಂದಿ ನಮಗೆ ಕರೆ ಮಾಡುತ್ತಿದ್ದಾರೆ. ನಾವು ದೇಶದಿಂದ ದೇಶಕ್ಕೆ ಬಂದು ಇಲ್ಲಿ ಹೋರಾಟ ಮಾಡಿ ಬದುಕುತ್ತಿದ್ದೇವೆ. ರಾಷ್ಟ್ರಧ್ವಜ ನಮ್ಮ ಹೆಮ್ಮೆಯಾಗಿದೆ. ಅದನ್ನೇ ಬದಲಾವಣೆ ಮಾಡುತ್ತೇವೆ, ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಸಚಿವರೇ ಹೇಳಿಕೆ ನೀಡಿದ್ದು ಸರಿಯಲ್ಲ.
ವಿದೇಶದಲ್ಲೂ ರಾಷ್ಟ್ರಧ್ವಜ ನಮಗೆ ಗೌರವದ ಬದುಕುಕೊಟ್ಟಿದೆ. ಸಚಿವರ ಹೇಳಿಕೆಯಿಂದ ದೇಶಕ್ಕೆ ಮತ್ತು ಧ್ವಜಕ್ಕೆ ಅವಮಾನವಾಗಿದೆ. ವಿದೇಶದ ಬಹಳಷ್ಟು ಹೂಡಿಕೆದಾರರು ಹಿಂದೆ ಸರಿಯುತ್ತಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳು ಹಾಗೂ ನಡವಳಿಕೆಗಳ ಬಗ್ಗೆ ಈಗಾಗಲೇ ಸಿಂಗಪೂರ್ ಹಾಗೂ ಸೌದಿ ಪ್ರಧಾನಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಕೆನಡಾ ಪ್ರಧಾನಿಯೂ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮರ್ಯಾದೆ ಹರಾಜಾಗುತ್ತಿದೆ ಎಂದು ಆಕ್ಷೇಪಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಏಕವಚನದಲ್ಲಿ ವಾಗ್ಧಾಳಿ ನಡೆಸಿದ ಡಿ.ಕೆ.ಶಿವಕುಮಾರ್, ಹರಕಲು-ಬಚ್ಚಲು ಬಾಯಿ ವ್ಯಕ್ತಿ ಏನಾದರೂ ಮಾತನಾಡಲಿ. ಅದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಳ್ಳುತ್ತಿರುವುದು ದರುಂತ. ಬಿಜೆಪಿಯ ನಾಯಕರು, ಸಚಿವರು, ಅದರ ಅಂಗ ಸಂಸ್ಥೆಗಳು ಬೆಂಬಲ ವ್ಯಕ್ತ ಪಡಿಸಿದ ಬೇಸರದ ಸಂಗತಿ ಎಂದರು.
ಈಶ್ವರಪ್ಪ ಯಾರಿಗೂ ನಿಷ್ಠರಲ್ಲ. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದುಕೊಂಡು, ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಮುರುಗೇಶ್ ನಿರಾಣಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿಕೆ ನೀಡುತ್ತಾರೆ. ಅಂದೇ ಅವರನ್ನು ಸಂಪುಟದಿಂದ ವಜಾ ಮಾಡಬೇಕಿತ್ತು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲೂ ಸಚಿವರಾಗಿದ್ದುಕೊಂಡು ರಾಜ್ಯಪಾಲರಿಗೆ ಯಡಿಯೂರಪ್ಪ ಅವರ ವಿರುದ್ಧ ದೂರು ನೀಡಿದ್ದರು. ಅವರ ಪಕ್ಷಕ್ಕೆ, ನಾಯಕರಿಗೆ ಈಶ್ವರಪ್ಪ ನಿಷ್ಠರಲ್ಲ. ಇತ್ತ ದೇಶಕ್ಕೂ ನಿಷ್ಠರಲ್ಲ. ರಾಷ್ಟ್ರಧ್ವಜದ ವಿರುದ್ಧ ಹೇಳಿಕೆ ನೀಡುತ್ತಾರೆ. ಪ್ರಜಾಪ್ರಭುತ್ವ ಇಲ್ಲದಿದ್ದರೆ ಈಶ್ವರಪ್ಪನಿಗೆ ಚುನಾವಣೆ ನಿಲ್ಲಲು ಸಾಧ್ಯವಾಗುತ್ತಿತ್ತೆ. ಅವರ ಹೆಸರನ್ನು ಯಾರು ಹೇಳುತ್ತಿದ್ದರು ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ಬಿಜೆಪಿಯವರು ಈಶ್ವರಪ್ಪನನ್ನು ಸಂಪುಟದಿಂದ ವಜಾ ಮಾಡದಿದ್ದರೆ ಇಟ್ಟುಕೊಳ್ಳಲಿ. ನಾಳೆ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ, ತಾಲ್ಲೂಕುಗಳ ತಹಸೀಲ್ದಾರಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತಾರೆ. ನಾವು ವಿಧಾನಸೌಧದ ಒಳಗೆ ಹೋರಾಟ ಮುಂದುವರೆಸುತ್ತೇವೆ. ನಾಳೆಯಷ್ಟೇ ಅಲ್ಲ ಈಶ್ವರಪ್ಪರನ್ನು ಸಂಪುಟದಿಂದ ವಜಾಗೊಳಿಸಿ, ಕ್ರಮ ಕೈಗೊಳ್ಳುವವರೆಗು ನಮ್ಮ ಹೋರಾಟ ನಿರಂತರ. ಅವೇಶನ ಮುಂದೂಡಲಿ, ಮತ್ತಷ್ಟು ದಿನ ನಡೆಸಲಿ ಆವರೆಗೂ ನಾವು ಪ್ರತಿಭಟನೆ ನಡೆಸುತ್ತಲೇ ಇರುತ್ತೇವೆ ಎಂದರು.
ರಾಷ್ಟ್ರದ್ರೋಹದ ಹೇಳಿಕೆ ನೀಡಿದ ಈಶ್ವರಪ್ಪ ವಿರುದ್ಧ ರಾಜ್ಯಪಾಲರೇ ಸ್ವಯಂ ಪ್ರೇರಿತರಾಗಿ ಕ್ರಮ ತೆಗೆದುಕೊಳ್ಳಬೇಕಿತ್ತು. ಸಂಸತ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದ ಥಾವರ್ ಚಂದ್ ಗೆಲ್ಹೋಟ್ ಅವರು ಒಂದೆರಡು ದಿನಗಳಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿ, ನಾವು ಜಂಟಿ ಅವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಅವಕಾಶ ನೀಡಿದ್ದೇವು. ಅಂದು ಕಪ್ಪು ಪಟ್ಟಿ ಧರಿಸಿ ನಮ್ಮ ಪ್ರತಿಭಟನೆಯನ್ನು ಶಾಂತಿಯುತವಾಗಿ ವ್ಯಕ್ತ ಮಾಡಿದ್ದೇವು. ಇಲ್ಲವಾದರೆ ಭಾಷಣಕ್ಕೆ ಅವಕಾಶ ನೀಡುತ್ತಿರಲಿಲ್ಲ ಎಂದರು.
ಈ ನಡುವೆ ಅಂಬೇಡ್ಕರ್ ಗೆ ಅಪಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ನಿನ್ನೆ ದಲಿತ ಸಂಘಟನೆಗಳು ಬೆಂಗಳೂರಿನಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿವೆ. ಈ ಸರ್ಕಾರದಲ್ಲಿ ಎಲ್ಲಾ ವರ್ಗಗಳಿಗೂ ಅನ್ಯಾಯವಾಗುತ್ತಿದೆ. ದಲಿತರ ಬೃಹತ್ ಪ್ರತಿಭಟನೆಯನ್ನು ನಾನು ಅಭಿನಂಸುತ್ತೇನೆ ಎಂದರಲ್ಲದೆ, ಸರ್ಕಾರ ಅಂಬೇಡ್ಕರ್‍ಗೆ ಅಪಮಾನ ಮಾಡಿದ ನ್ಯಾಯಾೀಶರ ವಿರುದ್ಧ ಕ್ರಮ ಜರುಗಿಸಲು ಕಾನೂನು ಸಚಿವಾಲಯದಿಂದ ಹೈಕೋರ್ಟ್ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಬೇಕಿತ್ತು ಎಂದು ಹೇಳಿದರು.

Articles You Might Like

Share This Article