ಟೊಕಿಯೋ,ಫೆ.1-ಜಪಾನ್ ವಾಯು ಸ್ವರಕ್ಷಣಾ ಪಡೆಯ ಎಫ್-15 ಸಮರ ಜೆಟ್ ಸಮುದ್ರದ ಮೇಲೆ ತರಬೇತಿ ಸಮಯದಲ್ಲಿ ಇದ್ದಕ್ಕಿದಂತೆ ಕಣ್ಮರೆಯಾಗಿದ್ದು ಕುತೂಹಲ ಕೆರಳಿಸಿದೆ. ಮಧ್ಯ ಜಪಾನಿನ ಇಶಿಕಾವಾ ಪ್ರಾಂತ್ಯದ ಕೊಮಾಟ್ಸು ವಾಯುನೆಲೆಯಿಂದ ಟೇಕ್ ಆಫ್ ಆದ ನಂತರ ಜೆಟ್ ರಾರ್ಡಾ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ, ಸೋಮವಾರ ಸಂಜೆ ಯುದ್ಧವಿಮಾನವು ಜಪಾನ್ ಸಮುದ್ರದ ಪಶ್ಚಿಮ-ವಾಯವ್ಯಕ್ಕೆ 5 ಕಿಮೀ ದೂರದಲ್ಲಿ ಇಬ್ಬರು ಸಿಬ್ಬಂದಿಯೊಂದಿಗೆ ತರಬೇತಿ ನಡೆಸುತ್ತಿದ್ದಾಗ ಕಣ್ಮರೆಯಾಯಿತು. ಕನಜಾವಾ ಸಮುದ್ರ ಗಾರ್ಡ್ ಕಚೇರಿಯು ಅದೇ ಸಮಯದಲ್ಲಿ ಕಾಗಾ ಕರಾವಳಿಯಲ್ಲಿ ಕೆಂಪು ಹೊಳಪನ ರೂಪದ ವಸ್ತು ಕಾಣಿಸಿತು ಎಂದು ವರದಿ ಮಾಡಿದೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ವಿಮಾನವು ರಾಡಾರ್‍ನಿಂದ ಹೊರಗುಳಿದ ಪ್ರದೇಶದಲ್ಲಿ ಕೆಲವು ತೇಲುವ ವಸ್ತುಗಳನ್ನು ಕಂಡುಕೊಂಡಿದೆ ಎಂದು ಹೇಳಲಾಗಿದೆ. ಈ ವೇಳೆ ಏನನ್ನು ದೃಢೀಕರಿಸಲಾಗುವುದಿಲ್ಲ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
