ಡೆಹರಾಡೋನ್, ಡಿ.3- ಧರ್ಮ ಸಂಸತ್‍ನಲ್ಲಿ ದ್ವೇಷಿಯ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ಎರಡನೇ ಪ್ರಥಮ ಮಾಹಿತಿ ವರದಿ ದಾಖಲಾಗಿದ್ದು, 10 ಮಂದಿ ಆರೋಪಿಗಳನ್ನು ಗುರುತಿಸಲಾಗಿದೆ. ಉತ್ತರ ಖಾಂಡ್‍ನ ಹರಿದ್ವಾರದಲ್ಲಿ ಡಿಸೆಂಬರ್ 16 ರಿಂದ 19ರ ನಡುವೆ ನಡೆದ ಧರ್ಮಸಂಸತ್ ಸಮಾವೇಶದಲ್ಲಿ ಹಲವು ಸ್ವಾಮೀಜಿಗಳು ಭಾಷಣ ಮಾಡಿದ್ದರು.
ಅದರಲ್ಲಿ ಕೆಲವರು ಅನ್ಯ ಧರ್ಮ ಅಸಹಿಷ್ಣುತೆಗೆ ಕುಮ್ಮಕ್ಕು ನೀಡುವಂತೆ ಮಾತುಗಳನ್ನಾಡಿದರು ಎಂಬ ಆರೋಪವಿದೆ. ಈ ಕುರಿತಂತೆ ಈಗಾಗಲೇ ಮೊದಲ ಎಫ್‍ಐಆರ್ ದಾಖಲು ಮಾಡಿ ಹಲವರನ್ನು ಬಂಧಿಸಲಾಗಿದೆ.
ಸ್ಥಳೀಯರಾದ ನದೀಮ್ ಆಲಿ ಎಂಬುವರು ಜವಲಾಪುರ್ ಪೊಲೀಸ್ ಠಾಣೆಗೆ ನೀಡಿದ ದೂರು ಆಧರಿಸಿ ಎರಡನೇ ಎಫ್‍ಐಆರ್ ದಾಖಲಿಸಲಾಗಿದೆ. ಅದರಲ್ಲಿ ಕಾರ್ಯಕ್ರಮ ಆಯೋಜಕರಾದ ಯತಿ ನರಸಿಂಹಾನಂದ ಗಿರಿ, ಹಿಂದೆ ವಸೀಂ ರಿಜ್ವಿ ಆಗಿದ್ದ ಜಿತೇಂದ್ರ ನಾರಾಯಣ್ ತ್ಯಾಗಿ, ಸಿಂಧು ಸಾಗರ್, ಧರ್ಮದಾಸ್, ಪ್ರಮಾನಂದ, ಸಾಧ್ವಿ ಅನುಪೂರ್ಣ, ಆನಂದ್ ಸ್ವರೂಪ್, ಅಶ್ವಿನಿ ಉಪಾಧ್ಯಾಯ, ಸುರೇಶ್ ಚಹ್ವಾಣ್ ಮತ್ತು ಪ್ರಬೋದಾನಂದ ಗಿರಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಧರ್ಮಸಂಸತ್‍ನಲ್ಲಿನ ವಿವಾದಾತ್ಮಕ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಖಾಂಡ್‍ನ ಬಿಜೆಪಿ ಸರ್ಕಾರದ ಮೇಲೆ ವ್ಯಾಪಕ ಒತ್ತಡ ಕೇಳಿ ಬಂದಿತ್ತು. ಮುಸ್ಲಿಂ ಸಮುದಾಯ ಶುಕ್ರವಾರ ಮತ್ತು ಶನಿವಾರ ಬೃಹತ್ ಪ್ರತಿಭಟನೆ ನಡೆಸಿತ್ತು. ಅದಕ್ಕಾಗಿ ಎರಡನೇ ಎಫ್‍ಐಆರ್ ದಾಖಲಿಸಲಾಗಿದೆ, ಜೊತೆಗೆ ತನಿಖೆಗೆ ಭಾನುವಾರ ವಿಶೇಷ ತನಿಖಾ ದಳವನ್ನು ರಚನೆ ಮಾಡಲಾಗಿದೆ.
