ದುರಾಭ್ಯಾಸಗಳಿಗಾಗಿ ಕಳ್ಳತನಕ್ಕಿಳಿದ ಸೆಕ್ಯುರಿಟಿ ಗಾರ್ಡ್ ಅರೆಸ್ಟ್

Social Share

ಬೆಂಗಳೂರು, ಜು.13-ತನ್ನ ದುರಾಭ್ಯಾಸಗಳ ಖರ್ಚಿಗೆ ಬರುವ ಸಂಬಳ ಸಾಕಾಗದ ಕಾರಣ ದ್ವಿಚಕ್ರ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಗಾರ್ಮೆಂಟ್ಸ್ ಸೆಕ್ಯುರಿಟಿ ಗಾರ್ಡ್‍ನನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 12.5 ಲಕ್ಷ ರೂ. ಬೆಲೆ ಬಾಳುವ 25 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಂಪೇಗೌಡ ಲೇಔಟ್, ಲಗ್ಗೆರೆಯ ಶ್ರೀನಿವಾಸ್ (39) ಬಂಧಿತ ಸೆಕ್ಯುರಿಟಿ ಗಾರ್ಡ್. ಈತನ ಬಂಧನದಿಂದ ಮಹಾಲಕ್ಷ್ಮೀ ಲೇಔಟ್ ಠಾಣೆಯ 21 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 4 ದ್ವಿಚಕ್ರವಾಹನಗಳ ವಾರಸುದಾರರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

ರಾಜಾಜಿನಗರ ಮೆಟ್ರೋ ನಿಲ್ದಾಣ ಹತ್ತಿರದ ರಸ್ತೆ ಬದಿಯಲ್ಲಿ ಜೂ. 22ರಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ಪಿರ್ಯಾದುದಾರರು ತಮ್ಮ ಹೊಂಡಾ ಸಿಬಿ ಶೈನ್ ದ್ವಿಚಕ್ರ ವಾಹವನ್ನು ನಿಲ್ಲಿಸಿ ಕೆಲಸಕ್ಕೆ ಹೋಗಿ ಸಂಜೆ 6 ಗಂಟೆಗೆ ಬಂದು ನೋಡಿದಾಗ ಬೈಕ್ ಇರಲಿಲ್ಲ.

ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೆಲವು ತಿಂಗಳುಗಳಿಂದ ಈ ವ್ಯಾಪ್ತಿಯಲ್ಲಿ ಹೆಚ್ಚಾಗಿ ದ್ವಿಚಕ್ರ ವಾಹನ ಕಳವು ಪ್ರಕರಣಗಳು ವರದಿಯಾಗುತ್ತಿದ್ದ ಬಗ್ಗೆ ಇನ್‍ಸ್ಪೆಕ್ಟರ್ ಕಾಂತರಾಜು ಗಂಭೀರವಾಗಿ ಪರಿಗಣಿಸಿದ್ದರು.

ದ್ವಿಚಕ್ರ ವಾಹನ ಕಳವು ಪ್ರಕರಣಗಳ ಪತ್ತೆಗಾಗಿ ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಪ್ರವೀಣ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಕಾರ್ಯಾಚರಣೆ ಕೈಗೊಂಡು ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿದ್ದ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಯ ಮುಖಚಹರೆಯನ್ನು ಪಡೆದುಕೊಂಡು ಪತ್ತೆ ಕಾರ್ಯದಲ್ಲಿ ತೊಡಗಿ ಒಬ್ಬನನ್ನು ಬಂಧಿಸಿದೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಆತ ಕಳವು ಮಾಡಿದ್ದ ಸುಮಾರು 12.5 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪೆನಿಯ 25 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯು ಗಾರ್ಮೆಂಟ್ಸ್‍ನಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡಿಕೊಂಡಿದ್ದು, ಬರುವ ಸಂಬಳ ತನ್ನ ದುರಾಭ್ಯಾಸಗಳ ಖರ್ಚಿಗೆ ಸಾಕಾಗದ ಕಾರಣ ದ್ವಿಚಕ್ರವಾಹನಗಳನ್ನು ಕಳವು ಮಾಡಿ ಮಾರಿದರೆ ಸುಲಭವಾಗಿ ಹಣ ಗಳಿಸಬಹುದೆಂದು ಕಳ್ಳತನ ಮಾಡುತ್ತಿದ್ದ.

ರಾಜಾಜಿನಗರದ ಮೆಟ್ರೋ ನಿಲ್ದಾಣದ ಅಕ್ಕ-ಪಕ್ಕ ಮತ್ತು ಅಕ್ಕಮಹಾದೇವಿ ಪಾರ್ಕ್ ಸುತ್ತ-ಮುತ್ತ ಸಾರ್ವಜನಿಕರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಕೆಲಸಕ್ಕೆ ಹೋಗುವುದನ್ನು ಗಮನಿಸಿ, ತದ ನಂತರ ನಕಲಿ ಕೀಗಳನ್ನು ಬಳಸಿ ಕಳ್ಳತನ ಮಾಡುತ್ತಿದ್ದುದ್ದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಆರೋಪಿಯು 2019ನೇ ಸಾಲಿನಿಂದ ದ್ವಿಚಕ್ರ ವಾಹನ ಕಳವು ಮಾಡುವ ಕೃತ್ಯದಲ್ಲಿ ತೊಡಗಿರುತ್ತಾನೆ. ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಕೋಲಾರ ಮತ್ತು ಆಂಧ್ರ ಪ್ರದೇಶ ರಾಜ್ಯದಲ್ಲಿರುವ ತನ್ನ ಸ್ನೇಹಿತರಿಗೆ ತಾವು ಬೆಂಗಳೂರಿನಲ್ಲಿ ಸೆಕೆಂಡ್‍ಹ್ಯಾಂಡ್ ಬೈಕ್‍ಗಳ ವ್ಯಾಪಾರ ಮಾಡುತ್ತಿದ್ದೇನೆಂದು ಹೇಳಿ ದಾಖಲಾತಿಗಳನ್ನು ನಂತರ ತಂದು ಕೊಡುವುದಾಗಿ ತಿಳಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿರುತ್ತದೆ.

ಎಸಿಪಿ ಪ್ರವೀಣ್, ಇನ್‍ಸ್ಪೆಕ್ಟರ್ ಕಾಂತರಾಜು, ಪಿಎಸ್‍ಐ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಸಿ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article