ಸ್ವ ಉದ್ಯೋಗಕ್ಕೆ ಟ್ಯಾಕ್ಸಿಗಳ ವಿತರಣೆ

Spread the love

ಬೆಂಗಳೂರು -ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರುದ್ಯೋಗಿ ಯುವಕ- ಯುವತಿಯರಿಗೆ ನೀಡುವ ಪ್ರವಾಸಿ ಟ್ಯಾಕ್ಸಿ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಹಸಿರು ನಿಶಾನೆ ತೋರಿದರು. ವಿಧಾನಸೌಧದ ಮುಂಭಾಗ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ನಿರುದ್ಯೋಗಿ ಯುವಕ- ಯುವತಿಯರಿಗೆ ಪ್ರವಾಸಿ ಟ್ಯಾಕ್ಸಿಗಳ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಸಿರು ನಿಶಾನೆ ತೋರಿದರು.

ನಂತರ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಪ್ರವಾಸಿ ಟ್ಯಾಕ್ಸಿ ನೀಡುವ ವಿನೂತನ ಯೋಜನೆಯನ್ನು ಪ್ರವಾಸೋ ದ್ಯಮ ಇಲಾಖೆ ಹಮ್ಮಿಕೊಂಡಿದೆ. ಇದರ ಸದ್ಭಳಕೆ ಮಾಡಿಕೊಂಡು ಸ್ವತಂತ್ರ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು. ರಾಜ್ಯಾದ್ಯಂತ 450 ಟ್ಯಾಕ್ಸಿಗಳನ್ನು ನೀಡಲಾಗುತ್ತಿದ್ದು, ಇಂದು 107 ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಲಾಯಿತು.

2019-20ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ 190 ಫಲಾನುಭವಿಗಳಿಗೆ 5.70 ಕೋಟಿ ರೂ. ಪರಿಶಿಷ್ಟ ಪಂಗಡದ 72 ಫಲಾನುಭವಿಗಳಿಗೆ 2.16 ಕೋಟಿ ರೂ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ 262 ಫಲಾನುಭವಿಗಳಿಗೆ ತಲಾ 3 ಲಕ್ಷ ರೂ.ನಂತೆ 7.86 ಕೋಟಿ ರೂ. ಸಹಾಯಧನವನ್ನು ಪ್ರವಾಸಿ ಟ್ಯಾಕ್ಸಿಗಳಿಗೆ ನೀಡಲಾಗಿದೆ. ರಾಜ್ಯದಲ್ಲಿ 2019-20ನೇ ಸಾಲಿನಲ್ಲಿ ಒಟ್ಟು 15.72 ಕೋಟಿ ರೂ. ಸಹಾಯಧನವನ್ನು ಪ್ರವಾಸಿ ಟ್ಯಾಕ್ಸಿಗಳಿಗೆ ನೀಡಲಾಗಿದೆ.

ರೈತರು ಹಾಗೂ ಕಾರ್ಮಿಕರ ಹಿತ ಕಾಪಾಡು ವಂತಹ ರಾಜ್ಯ ಬಜೆಟ್‍ನ್ನು ಮಾರ್ಚ್ 5ಕ್ಕೆ ಮಂಡಿಸಲಾಗುವುದು. ಈಗಾಗಲೇ ಬಜೆಟ್ ಸಿದ್ಧತೆ ಆರಂಭಿಸಲಾಗಿದೆ. ನಾಳೆಯಿಂದ ನಿರಂತರವಾಗಿ ಬಜೆಟ್ ಸಿದ್ಧತೆಯಲ್ಲಿ ತೊಡಗಿಕೊಳ್ಳಲಾಗುವುದು. ಕೇಂದ್ರ ಬಜೆಟ್‍ನಿಂದ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇಲಾಖಾವಾರು ಕಾರ್ಯಕ್ರಮಗಳ ಪ್ರಗತಿ ಪಡೆದು ಮುಂದಿನ ಆಯವ್ಯಯದ ಸಿದ್ಧತೆ ನಡೆಸುವುದಾಗಿ ಸಿಎಂ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇನ್ನೆರಡು ದಿನದಲ್ಲಿ ತೀರ್ಮಾನ ಮಾಡಲಾಗುವುದು ಎಂದರು. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕ ಮಹೇಶ್ ಕುಮಟಳ್ಳಿ, 35 ಸಾವಿರ ಜನರ ಸಮ್ಮುಖದಲ್ಲಿ ಮುಖ್ಯಮಂತ್ರಿ ಮಾತು ಕೊಟ್ಟಿದ್ದು, ಅದನ್ನು ಸಿಎಂ ಈಡೇರಿಸುತ್ತಾರೆ ಎಂದು ಹೇಳಿದ್ದಾರಲ್ಲ ಎಂಬ ವರದಿಗಾರರ ಪ್ರಶ್ನೆಗೆ ಯಡಿಯೂರಪ್ಪ ಮಾತನಾಡುತ್ತೇನೆ ಎಂದಷ್ಟೇ ಉತ್ತರಿಸಿದರು.

ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ಮಾತನಾಡಿ, 2009-10ರಲ್ಲೇ ನಿರುದ್ಯೋಗಿಗಳು ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಯಡಿಯೂರಪ್ಪ ಪ್ರವಾಸಿ ಟ್ಯಾಕ್ಸಿ ಯೋಜನೆ ಜಾರಿಗೆ ತಂದಿದ್ದು, ಇದು ಉತ್ತಮ ಯೋಜನೆಯಾಗಿದ್ದು, ಈ ಯೋಜನೆ ಜಾರಿಗೊಳಿಸಿರುವುದಕ್ಕೆ ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.

ಮುಂದಿನ ವರ್ಷದಿಂದ ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಯನ್ನು ರೂಪಿಸಲಾಗು ವುದು. ಕ್ರೀಡಾ ಸಾಮಗ್ರಿಗಳು, ಮೊಬೈಲ್ ಶೌಚಾಲಯ, ಕ್ಯಾಂಟೀನ್ ಮೊದಲಾದವುಗಳನ್ನು ಸಹಾಯಧನದಲ್ಲಿ ವಿತರಿಸುವ ಚಿಂತನೆ ಇದೆ ಎಂದು ಹೇಳೀದರು. ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ ಸಿ.ಸಿ.ಪಾಟೀಲ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಕೆ.ಎನ್.ರಮೇಶ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ, ವಾರ್ತಾ ಮತ್ತು ಸಂಪರ್ಕ ಸಾರ್ವಜನಿಕ ಇಲಾಖೆ ಉಪನಿರ್ದೇಶಕ ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.

Facebook Comments