ಬೆಂಗಳೂರು,ಜ.3- ಹೊಸ ವರ್ಷ ಆರಂಭವಾಗುತ್ತಿದ್ದಂತೆ ನಗರ ಕೊರೊನಾ ಹಾಟ್‍ಸ್ಪಾಟ್ ಆಗಿ ಪರಿವರ್ತನೆಗೊಂಡಿರುವುದರಿಂದ ಬೆಂಗಳೂರಿನಲ್ಲಿ ಆತಂಕ ಹೆಚ್ಚಾಗಿದ್ದು, ಸರ್ಕಾರ ಹಲವು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಟಫ್ ರೂಲ್ಸ್ ಜಾರಿಗೆ ತರುವ ಅಗತ್ಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಮತ್ತೆ ಲಾಕ್‍ಡೌನ್ ಇಲ್ಲವೆ ಸೆಮಿ ಲಾಕ್‍ಡೌನ್ ಆಗುವ ಸಾಧ್ಯತೆಗಳು ಹೆಚ್ಚಾಗಿದೆ.
ಬುಧವಾರ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣ ಕುರಿತಂತೆ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಲಿದ್ದು, ಆ ನಂತರ ನಗರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆ ಮಾಡಲಾಗುವುದು. ಈಗಾಗಲೆ ಕೊರೊನಾ ಸೋಂಕು ಹೆಚ್ಚಳವಾಗಿರುವುದರಿಂದ ಮಹಾರಾಷ್ಟ್ರದಲ್ಲಿ ಮಾಡಲಾಗಿರುವ ಲಾಕ್‍ಡೌನ್ ಮಾದರಿ ಲಾಕ್‍ಡೌನ್ ಮಾಡಲಾಗುವುದೋ ಆಥವಾ ಯಾವ ರೀತಿಯ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಾದುನೋಡಬೇಕಿದೆ.
ತಜ್ಞರು ನೀಡುವ ಮಾಹಿತಿಯನ್ನಾಧರಿಸಿ ಶಾಲಾ-ಕಾಲೇಜುಗಳಿಗೆ ಬಿಗ ಬಿದ್ದರೂ ಅಚ್ಚರಿ ಪಡುವಂತಿಲ್ಲ. ಬಸ್‍ಗಳಲ್ಲಿ ಮತ್ತೆ ಫಿಫ್ಟಿ ರೂಲ್ಸ್ ಜÁರಿಗೆ ಬರಲೂಬಹುದು, ಮಾಲ್, ಚಿತ್ರಮಂದಿರ, ಬಾರ್, ಕ್ಲಬ್‍ಗಳಲ್ಲಿ ಶೇ.50 ರಷ್ಟು ಹಾಜರಾತಿಗೆ ಅವಕಾಶ ನೀಡಬಹುದು. ಜಿಮ್, ಈಜುಕೊಳ, ಮಾರುಕಟ್ಟೆಗಳಿಗೂ ಟಫ್ ರೂಲ್ಸ್ ಜಾರಿ ಮಾಡಬಹುದಾಗಿದೆ.
ಮೂರನೆ ಅಲೆ ಎಚ್ಚರಿಕೆ: ಕೊರೊನಾ ಹಾಗೂ ಓಮಿಕ್ರಾನ್ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿರುವುದರಿಂದ ಮೂರಲೆ ಅಲೆ ಭೀತಿ ಆರಂಭವಾಗುವ ಸಾಧ್ಯತೆ ಇರುವುದರಿಂದ ತಜ್ಞರು ಮತ್ತೆ ಲಾಕ್‍ಡೌನ್ ವಿಚಾರ ಪ್ರಸ್ತಾಪ ಮಾಡಿದ್ದಾರೆ.
ಹಲವು ತಿಂಗಳುಗಳ ಬಳಿಕೆ ನಗರದಲ್ಲಿ ಮತ್ತೆ ಪ್ರತಿನಿತ್ಯದ ಕೊರೊನಾ ಪ್ರಕರಣಗಳ ಸಂಖ್ಯೆ ಒಂದು ಸಾವಿರದ ಗಡಿ ದಾಟಿರುವುದರಿಂದ ಈಗಲೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಎರಡನೆ ಅಲೆ ಮಾದರಿಯಲ್ಲಿ ಸಾವು-ನೋವುಗಳನ್ನು ಕಾಣಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.
21 ಮಂದಿ ಬಲಿ: ಕಳೆದ ಹತ್ತು ದಿನಗಳಲ್ಲಿ ಕೊರೊನಾದಿಂದ ಕಾಣಿಸಿಕೊಂಡ ಉಸಿರಾಟದ ಸಮಸ್ಯೆಯಿಂದ ಬರೊಬ್ಬರಿ 21 ಮಂದಿ ಬಲಿಯಾಗಿರುವುದು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ. ಇತ್ತಿಚೆಗೆ ಕೊರೊನಾಗೆ 41 ಮಂದಿ ಬಲಿಯಾಗಿದ್ದು,ಇವರಲ್ಲಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿರುವುವರ ಸಂಖ್ಯೆಯೇ 21ರಷ್ಟಿದೆ.
ಎರಡನೆ ಅಲೆ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆಯಿಂದಲೆ ನೂರಾರು ಮಂದಿ ಬಲಿಯಾಗಿದ್ದರೂ, ಇದೀಗ ಮತ್ತೆ ಉಸಿರಾಟ ಸಮಸ್ಯೆಯಿಂದ 21 ಮಂದಿ ಬಲಿಯಾಗಿರುವುದು ಆತಂಕ ಹೆಚ್ಚು ಮಾಡಿದೆ.
ಎಂಟು ಮಂದಿಗೆ ಓಮಿಕ್ರಾನ್: ಹೊರ ರಾಜ್ಯಗಳೂ ಹಾಗೂ ವಿದೇಶಗಳಿಂದ ಆಗಮಿಸುತ್ತಿರುವ ಹಲವಾರು ಮಂದಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಧಾರವಾಡದ ಇಬ್ಬರು ಹಾಗೂ ಬೆಂಗಳೂರಿನ ಎಂಟು ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ.
