ಜ.10ರಿಂದ ಹಿರಿಯ ನಾಗರಿಕರಿಗೆ ಬೂಸ್ಟರ್ ಲಸಿಕೆ

Social Share

ಬೆಂಗಳೂರು,ಜ.5- ರಾಜ್ಯದಲ್ಲಿ ಕೋವಿಡ್ ಸೋಂಕು ಹಾಗೂ ಓಮಿಕ್ರಾನ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜ.10ರಿಂದ 60 ವರ್ಷ ಮೇಲ್ಪಟ್ಟವರು, ಮುಂಚೂಣಿ ವಾರಿಯರ್ಸ್, ಆರೋಗ್ಯ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಗೆ 3ನೇ ಹಂತದ ಲಸಿಕೆಯಾದ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿರುವ ಹಿರಿಯ ನಾಗರಿಕರು, ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ವೈದ್ಯರು, ದಾದಿಯರು, ಫ್ರಂಟ್‍ಲೈನ್ ವಾರಿಯರ್ಸ್‍ಗೆ ಬೂಸ್ಟರ್ ಡೋಸ್ ನೀಡಲಾಗುವುದು. ಅದೇ ರೀತಿ ದೀರ್ಘಕಾಲದ ರೋಗಗಳಾಗಿರುವವರಿಗೂ ಡೋಸ್ ನೀಡಲಾಗುತ್ತದೆ ಎಂದರು.
ವಾರಾಂತ್ಯ ಕಫ್ರ್ಯೂ ಸೇರಿದಂತೆ ಕಠಿಣ ಮಾರ್ಗಸೂಚಿಯನ್ನು ಸರ್ಕಾರ ಯಾವುದೇ ದುರದ್ದೇಶದಿಂದ ಜಾರಿಗೆ ತಂದಿಲ್ಲ. ನಿರಂತರವಾಗಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹರಡುವಿಕೆಯನ್ನು ತಡೆಗಟ್ಟಲು ಜಾರಿಗೆ ತರಲಾಗಿದೆ. ಹೀಗಾಗಿ ರಾಜಕೀಯ ಪಕ್ಷಗಳ ನೇತಾರರು, ಸಂಘಸಂಸ್ಥೆಗಳ ನೇತಾರರು ಸರ್ಕಾರದ ಜೊತೆ ಸಹಕರಿಸಬೇಕು. ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಅರ್ಥ ಮಾಡಿಕೊಂಡು ರೋಗ ಹರಡುವಿಕೆ ತಡೆಯಲು ಸಹಕಾರ ನೀಡಬೇಕು ಎಂದು ಕೋರಿದರು.
ಮೂರನೇ ಅಲೆಯ ಸೋಂಕು ಅತಿ ವೇಗವಾಗಿ ಹರಡುತ್ತದೆ. ಅದೇ ರೀತಿ ಬಹುಬೇಗ ಕಡಿಮೆಯಾಗುತ್ತದೆ. ಹೀಗಾಗಿ 4ರಿಂದ 6 ವಾರಗಳ ಕಾಲ ಎಚ್ಚರಿಕೆಯಿಂದ ಇದ್ದು ನಿಯಂತ್ರಣ ಮಾಡಬೇಕು. ಸೋಂಕು ಕಾಣಿಸಿಕೊಂಡ ಕೂಡಲೇ ಯಾರೂ ಗಾಬರಿಯಾಗುವುದು ಬೇಡ ಎಂದರು. ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಅಗತ್ಯವೂ ಇಲ್ಲ. ಈ ರೋಗಾಣು ಮೂಗಿನಿಂದ ಗಂಟಲುವರೆಗೆ ಮಾತ್ರ ಪ್ರವೇಶಿಸುತ್ತದೆ.
ಶ್ವಾಸಕೋಶಕ್ಕೆ ಹೋಗುವ ಸಾಧ್ಯತೆ ಕಡಿಮೆಯಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಹೇಳಿದರು.
ಮಕ್ಕಳಿಗೆ ಲಸಿಕೆ ನೀಡುವುದರಲ್ಲಿ ನಮ್ಮ ರಾಜ್ಯ ರಾಷ್ಟ್ರದಲ್ಲಿ ಮೂರನೇ ಸ್ಥಾನದಲ್ಲಿದೆ. ನಿನ್ನೆ ಮೂರುವರೆ ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಶೇ.25ರಷ್ಟು 4 ಮಕ್ಕಳಲ್ಲಿ ಒಬ್ಬರಿಗೆ ಲಸಿಕೆ ನೀಡಿದಂತಾಗಿದೆ. ನಿರೀಕ್ಷೆಯಂತೆ 10-15 ದಿನಗಳಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಿಕೆಯನ್ನು ಪೂರ್ಣಗೊಳಿಸಲಾಗುವುದು ಎಂದರು.
28 ದಿನಗಳ ಬಳಿಕ ಕೋವ್ಯಾಕ್ಸಿನ್‍ನ್ನು 2ನೇ ಡೋಸ್ ಆಗಿ ನೀಡಲಾಗುತ್ತದೆ. ಈ ಸಂಬಂಧಪಟ್ಟಂತೆ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ತಿಳಿಸಿದರು. ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಬಗ್ಗೆ ಮನಸ್ಸು ಬದಲಿಸುವ ನಿರೀಕ್ಷೆಯಿದೆ. ಕೋವಿಡ್ ಹೆಚ್ಚಾಗುತ್ತಿರುವ ಪರಿಸ್ಥಿತಿಯನ್ನು ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದ ಅನುಭವವಿರುವವರು ಆ ಪಕ್ಷದಲ್ಲಿ ಇದ್ದಾರೆ. ಮುಖ್ಯಮಂತ್ರಿ, ಸಚಿವರಾಗಿ ಆಡಳಿತ ನಡೆಸಿದವರು ಇದ್ದಾರೆ.
ಆರೋಗ್ಯ ತುರ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪಾದಯಾತ್ರೆ ನಡೆಸುವ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಅಷ್ಟರಮಟ್ಟಿನ ಸಾಮಾನ್ಯಜ್ಞಾನ ಇದೆ ಎಂದು ಭಾವಿಸುತ್ತೇನೆ. ಇಲ್ಲದಿದ್ದರೆ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದರು.

Articles You Might Like

Share This Article