ಕಾಂಗ್ರೆಸ್ ಹಿರಿಯ ನಾಯಕಿ-ಲೇಖಕಿ ಜಯಂತಿ ಪಟ್ನಾಯಕ್ ನಿಧನ

Social Share

ಭುವನೇಶ್ವರ್,ಸೆ.29-ಕಾಂಗ್ರೆಸ್ ಹಿರಿಯ ನಾಯಕಿ, ರಾಷ್ಟ್ರೀಯ ಮಹಿಳಾ ಆಯೋಗದ ಮೊದಲ ಅಧ್ಯಕ್ಷೆ ಹಾಗೂ ಮಾಜಿ ಸಂಸದೆ, ಖ್ಯಾತ ಲೇಖಕಿ ಜಯಂತಿ(90) ಪಟ್ನಾಯಕ್ ನಿಧನರಾಗಿದ್ದಾರೆ. ಒಡಿಶಾದ ಮಾಜಿ ಮುಖ್ಯಮಂತ್ರಿ, ಅಸ್ಸಾಂನ ಮಾಜಿ ಗವರ್ನರ್ ದಿವಂಗತ ಜೆ.ಬಿ.ಪಟ್ನಾಯಕ್ ಅವರ ಪತ್ನಿ ಹಾಗೂ ನಾಲ್ಕು ಬಾರಿ ಸಂಸದರಾಗಿದ್ದ ಜಯಂತಿ ಅವರು ಮೃತಪಟ್ಟಿದ್ದಾರೆ ಎಂದು ಪುತ್ರ ಪ್ರೀತಿವ್ ಬಲ್ಲಾವ್ ಪಟ್ನಾಯಕ್ ತಿಳಿಸಿದ್ದಾರೆ.

ಗಂಜಾಮ್ ಜಿಲ್ಲೆಯ ಅಸ್ಕಾದಲ್ಲಿ 1932ರ ಏಪ್ರಿಲ್ 7ರಂದು ಜನಿಸಿದ ಜಯಂತಿ, ಕಟಕ್‍ನ ಶೈಲಬಾಲಾ ಮಹಿಳಾ ಸ್ವಾಯತ್ತ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಪದವಿ ಹಾಗೂ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‍ನಲ್ಲಿ ಸ್ನಾತಕೋತ್ತರ ಪಡೆದಿದ್ದರು.

1953ರಲ್ಲಿ ಜೆ.ಬಿ.ಪಟ್ನಾಯಕ್ ಅವರನ್ನು ವಿವಾಹವಾದ ಜಯಂತಿ ಅವರು ಕಟಕ್ ಮತ್ತು ಬೆರ್ಹಾಂಪುರದಿಂದ ಲೋಕಸಭೆಗೆ ಚುನಾಯಿತರಾಗಿದ್ದರು. ಮಾಜಿ ಸಂಸದ, ಹಿರಿಯ ರಾಜಕಾರಣಿ ಮತ್ತು ಖ್ಯಾತ ಲೇಖಕಿ ಜಯಂತಿ ಪಟ್ನಾಯಕ್ ಅವರ ನಿಧನಕ್ಕೆ ಒಡಿಶಾ ರಾಜ್ಯಪಾಲ ಗಣೇಶಿ ಲಾಲ್ ಸಂತಾಪ ಸೂಚಿಸಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಸ್ಮರಣೀಯ ಎಂದಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಒಪಿಸಿಸಿ ಅಧ್ಯಕ್ಷ ಶರತ್ ಪಟ್ನಾಯಕ್, ಮಾಜಿ ಒಪಿಸಿಸಿ ಅಧ್ಯಕ್ಷ ನಿರಂಜನ್ ಪಟ್ನಾಯಕ್ ಸೇರಿದಂತೆ ಹಲವು ಗಣ್ಯರು ಆಕೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Articles You Might Like

Share This Article