ಬೆಂಗಳೂರು,ಅ.1- ಹಿರಿಯರ ಅನುಭವಗಳು ಇಂದಿನ ನಾಗರಿಕ ಸಮಾಜಕ್ಕೆ ಅತ್ಯಗತ್ಯವಾಗಿದ್ದು, ಕನ್ಸೆಲ್ಟೆನ್ಸಿ ಆಧಾರದಲ್ಲಿ ಅವರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ತಿಳಿಸಿದ್ದಾರೆ.
ವಿಕಲಚೇತನರು, ಹಿರಿಯ ನಾಗರಿಕರ ನಿರ್ದೇಶನಾಲಯದಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಹಿರಿಯರ ಸಲಹೆಗಳು, ಸೂಚನೆಗಳು, ಮಾರ್ಗದರ್ಶನ ಮುಂದಿನ ಪೀಳಿಗೆಗೂ ಅಗತ್ಯ. ಹೀಗಾಗಿ ಅವರನ್ನು ಕನ್ಸೆಲ್ಟೆನ್ಸಿ ಆಧಾರದಲ್ಲಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತೇವೆ. ಅವರ ಅನುಭವಕ್ಕೆ ತಕ್ಕಂತೆ ಕೆಲಸ ಮಾಡಲಿ ಎಂದು ಹೇಳಿದರು.
ಹಿರಿಯರನ್ನು ಕೆಲಸಕ್ಕೆ ತೆಗೆದುಕೊಂಡ ತಕ್ಷಣ ನಮಗೆ ಕೆಲಸ ಸಿಗುವುದಿಲ್ಲ ಎಂದು ಯುವಜನತೆ ಆತಂಕಪಡಬೇಕಾದ ಅಗತ್ಯವಿಲ್ಲ. ಅದರ ಪಾಡಿಗೆ ಅದು ನಡೆಯುತ್ತದೆ. ಅವರವರ ವಿದ್ಯಾರ್ಹತೆಗೆ ತಕ್ಕಂತೆ ಸರ್ಕಾರಿ ಕೆಲಸ ಸಿಗಲಿದೆ ಎಂದು ಅಭಯ ನೀಡಿದರು.
ನಾನು ಮುಖ್ಯಮಂತ್ರಿಯಾದ ಮೇಲೆ ಹಿರಿಯ ನಾಗರಿಕರಿಗೆ ಬಜೆಟ್‍ನಲ್ಲಿ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದೇನೆ. ಮಾಶಾಸನ ಹೆಚ್ಚಳ ಮಾಡಬೇಕೆಂಬುದು ಬೇಡಿಕೆಯಾಗಿತ್ತು. ಅದರಂತೆ ಅಕಾರ ವಹಿಸಿಕೊಂಡ ತಕ್ಷಣವೇ ಇದನ್ನು ಮಾಡಿರುವ ತೃಪ್ತಿ ಇದೆ ಎಂದು ಸಂತಸ ವ್ಯಕ್ತಪಡಿಸಿದರು.
ಹಿರಿಯರು ಸ್ವಾಭಿಮಾನದ ಬದುಕು ಸಾಸಬೇಕೆಂಬುದು ನಮ್ಮ ಸರ್ಕಾರದ ಉದ್ದೇಶ. ಯಾರ ಬಳಿಯೂ ಕೈ ಚಾಚದೆ ಕೊನೆಯುಸಿರು ಇರುವವರೆಗೂ ಸ್ವಾಭೀಮಾನಿಯಗಿ ಬದುಕಬೇಕು. ಹೀಗಾಗಿ 60 ವರ್ಷ ಮೇಲ್ಪಟ್ಟವರಿಗೆ ಎರಡು ಬಾರಿ ಆರೋಗ್ಯ ತಪಾಸಣೆ ಹಾಗೂ ಕನ್ನಡಕ, ಶ್ರವಣದೋಷ ಇರುವವರಿಗೆ ಕಾಕ್ಲಿಯರ್ ಮಿಷನ್ ಕೊಡಲು ಬಜೆಟ್‍ನಲ್ಲಿ 500 ಕೋಟಿ ಮೀಸಲಿಟ್ಟಿರುವುದಾಗಿ ಹೇಳಿದರು.
ಡಯಾಲೀಸ್ ವಿಚಾರದಲ್ಲೂ ಹಿರಿಯ ನಾಗರಿಕರಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಕ್ಯಾನ್ಸರ್ ಚಿಕಿತ್ಸೆಗೆ 12 ಹೊಸ ಕೇಂದ್ರಗಳನ್ನ ಪ್ರಾರಂಭಿಸುತ್ತಿದ್ದೇವೆ ಅಲ್ಲಿಯೂ ಕೂಡ ಹಿರಿಯರಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತೇವೆ ಎಂದರು. ಅನುಭವ ಇರುವವರು ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಮನುಷ್ಯನ ಅನುಭವದ ಬುತ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಲ್ಲರೂ ಹಿರಿಯರ ಅನುಭವನಗಳನ್ನು ಅಳವಡಿಸಿಕೊಂಡರೆ ಸದಾಕಾಲ ಕ್ರಿಯಾಶೀಲರಾಗಿರಬಹುದು ಎಂದು ಹೇಳಿದರು.
ನಿವೃತ್ತಿ ಎನ್ನುವುದು ಸರ್ಕಾರ ಮಾಡುವ ಕೆಲಸ. ಕೆಲವರಿಗೆ ಕೆಲಸ ಮಾಡುವ ಚೈತನ್ಯವಿದ್ದರೂ ವಿ ಇಲ್ಲದೆ ನಿವೃತ್ತಿ ಹೊಂದುತ್ತಾರೆ. ಇದು ಯುವಕರಿಗೆ ಅವಕಾಶ ಕಲ್ಪಿಸಿಕೊಡಬೇಕೆಂಬ ಕಾರಣಕ್ಕಾಗಿ ನಾವೇ ರೂಪಿಸಿಕೊಂಡಿರುವ ನಿಯಮ ಎಂದು ಅಭಿಪ್ರಾಯಪಟ್ಟರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ 7 ಮಂದಿ ಹಿರಿಯ ನಾಗರಿಕರಿಗೆ ಪ್ರಶಸ್ತಿ ನೀಡಲಾಯಿತು. ಸಚಿವರಾದ ಆಚಾರ್ ಹಾಲಪ್ಪ, ವಿ.ಸೋಮಣ್ಣ , ಶಂಕರ್ ಪಟೇಲ್ ಮುನೇನಕೊಪ್ಪ, ಶಾಸಕ ರವಿಸುಬ್ರಹ್ಮಣ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.