ನವದೆಹಲಿ, ಫೆ.24- ಉಕ್ರೇನ್ ಮೇಲೆ ರಷ್ಯಾದ ದಾಳಿ ಷೇರು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು ಹೂಡಿಕೆದಾರರ ಸಂಪತ್ತು ಇಂದು ಬೆಳಗಿನ ವಹಿವಾಟು ಆರಂಭವಾದ ಒಂದು ಗಂಟೆಯ ಒಳಗೆ 8 ಲಕ್ಷ ಕೋಟಿ ರೂ. ಗಳಷ್ಟು ಕುಸಿದಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಹೂಡಿಕೆದಾರರು ಹೆದರಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10-15ರ ಹೊತ್ತಿಗೆ ಬಿಎಸ್‍ಇ- ಸಂಬಂಧಿತ ಕಂಪನಿಗಳು 2,47,46,960.48 ಕೋಟಿ ರೂ.ಗಳಿಗೆ ಕುಸಿದಿವೆ.
ಬುಧವಾರದ ವಹಿವಾಟು ಮುಗಿದಾಗ ಹೂಡಿಕೆದಾರರ ರಾಷ್ಟ್ರೀಯ ಸಂಪತ್ತಿನ ಸೂಚ್ಯಂಕವಾಗಿರುವ ಮಾರುಕಟ್ಟೆ ಬಂಡವಾಳ ಕ್ರೋಢೀಕರಣವು 2,55,68,668.33 ಕೋಟಿ ರೂ. ಮಟ್ಟದಲ್ಲಿತ್ತು. ಇದು ಸಂಪತ್ತಿನ ನಷ್ಟ ಅಥವಾ ಸವಕಳಿಯು 8.2 ಲಕ್ಷ ಕೋಟಿ ರೂ.ಗಳಿಗೂ ಅಧಿಕವಾಗಿರುವುದನ್ನು ಸೂಚಿಸುತ್ತದೆ.
ಬಿಎಸ್‍ಇ ಸೆನ್ಸೆಕ್ಸ್ 1,718.99 ಅಂಕಗಳು ಅಥವಾ 3 ಪ್ರತಿಶತದಷ್ಟು ಕ್ಷೀಣಿಸಿ 55,513.07ಕ್ಕೆ ಇಳಿದಿದೆ ಮತ್ತು ನಿಫ್ಟಿ 508.85 ಅಂಕಗಳಷ್ಟು ಅಥವಾ 2.98 ಪ್ರತಿಶತದಷ್ಟು ಕುಸಿದು 16,554.40ಕ್ಕೆ ತಲುಪಿದೆ.
