ಅರಸೀಕೆರೆ ಬಳಿ ಭೀಕರ ಸರಣಿ ಅಪಘಾತ, 4 ಮಕ್ಕಳು ಸೇರಿ 9 ಮಂದಿ ಸಾವು..!

Social Share

ಅರಸೀಕೆರೆ, ಅ.16- ಟೆಂಪೋ ಟ್ರಾವೆಲರ್, ಹಾಲಿನ ಟ್ಯಾಂಕರ್ ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿದಂತೆ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬಾಣಾವರ ಸಮೀಪದ ಗಾಂಧಿನಗರದ ಬಳಿ ನಡೆದಿದೆ.

ಹಳ್ಳಿಕೆರೆ ಗ್ರಾಮದ ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50) ಮೃತಪಟ್ಟ ದುರ್ದೈವಿಗಳು. ಹಳ್ಳಿಕೆರೆ ಗ್ರಾಮದ 14 ಮಂದಿ ಟಿಟಿ ವಾಹನದಲ್ಲಿ ಸುಬ್ರಹ್ಮಣ್ಯ-ಧರ್ಮಸ್ಥಳಕ್ಕೆ ತೆರಳಿ ದರ್ಶನ ಪಡೆದು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು.

ಊರಿಗೆ ತಲುಪಲು ಕೆಲ ನಿಮಿಷವಿರುವಾಗಲೇ ಅಪಘಾತ ಸಂಭವಿಸಿದೆ. ಹಳ್ಳಿಕೆರೆ ಗ್ರಾಮದ 14 ಮಂದಿ ಟಿಂಪೋ ಟ್ರಾವೆಲರ್ ವಾಹನದಲ್ಲಿ ಶನಿವಾರ ಧರ್ಮಸ್ಥಳಕ್ಕೆ ತೆರಳಿದ್ದರು. ಮಕ್ಕಳು ಸೇರಿದಂತೆ ಪುರುಷರು ಮುಡಿ ಕೊಟ್ಟು ಶ್ರೀ ಮಂಜುನಾಥನ ಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿ ನಂತರ ಸಂಜೆ ಹಾಸನಕ್ಕೆ ತೆರಳಿ ಹಾಸನಾಂಬೆ ದರ್ಶನ ಪಡೆದು ಗ್ರಾಮಕ್ಕೆ ವಾಪಸಾಗುತ್ತಿದ್ದರು.

ಅರಸೀಕೆರೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ-69 ಬಾಣಾವರ ಬಳಿ ಕಾಮಗಾರಿ ನಡೆಯುತ್ತಿದ್ದು, ಟಿಟಿ ವಾಹನದ ಹಿಂದೆ ಸಾರಿಗೆ ಬಸ್ ಬರುತ್ತಿತ್ತು. ಶಿವಮೊಗ್ಗ ಕಡೆಯಿಂದ ಚನ್ನರಾಯಪಟ್ಟಣ ಕಡೆಗೆ ಬರುತ್ತಿದ್ದ ಯಮ ಸ್ವರೂಪಿ ಹಾಲಿನ ಟ್ಯಾಂಕರ್ ಚಾಲಕನಿಗೆ ತಿರುವು ಗೊತ್ತಾಗದೆ ಎರಡು ವಾಹನಗಳು ಬರುತ್ತಿದ್ದ ಕಡೆಗೆ ಏಕಮುಖವಾಗಿ ಚಲಿಸಿದ್ದಾನೆ.

ಈ ವೇಳೆ ವೇಗವಾಗಿದ್ದ ಟಿಟಿ ವಾಹನ ಟ್ಯಾಂಕರ್‍ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಇದೇ ವಾಹನದ ಹಿಂಬದಿಯಿದ್ದ ಬೆಂಗಳೂರು-ಶಿವಮೊಗ್ಗ ಮಾರ್ಗದ ಸಾರಿಗೆ ಬಸ್ ಟಿಟಿ ವಾಹನ ಸಿಲುಕಿ ಈ ಅಪಘಾತ ನಡೆದಿದೆ.

ಈ ಸರಣಿ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 12 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. 10 ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರು ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ರಭಸಕ್ಕೆ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಕ್ರೇನ್ ಮೂಲಕ ಟಿಟಿ ವಾಹನವನ್ನು ತೆರುವುಗೊಳಿಸಲಾಯಿತು. ಗಾಯಾಳುಗಳಲ್ಲಿ ಬಸ್ ಚಾಲಕ ಸೇರಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ.

ಹಾಲಿನ ಲಾರಿ ಚಾಲಕನದ್ದೇ ಸಂಪೂರ್ಣ ತಪ್ಪು ಎಂದು ಸ್ಥಳದಲ್ಲಿ ಇದ್ದ ಸ್ಥಳೀಯರು ತಿಳಿಸಿದ್ದು, ಆತ ರಾಂಗ್ ರೂಟ್‍ನಲ್ಲಿ ಬಂದಿದ್ದರಿಂದ ಈ ಅಪಘಾತ ಸಂಭವಿಸಿದೆ. ಟೆಂಪೋಗೆ ಹಿಂದೆ-ಮುಂದೆ ಎರಡೂ ಭಾಗಕ್ಕೂ ವಾಹನಗಳು ಡಿಕ್ಕಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಅಪಘಾತ ನಡೆದ ಸ್ಥಳಕ್ಕೆ ಎಸ್‍ಪಿ ಹರಿರಾಂ ಶಂಕರ್, ಅರಸೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Articles You Might Like

Share This Article