ಮಾತಿನ ಮನೆಯಲ್ಲಿ ಸಪ್ಪೆಯಾದ ಕಾಂಗ್ರೆಸ್ ಮುತ್ಸದ್ದಿಗಳು

Social Share

ಬೆಂಗಳೂರು,ಫೆ.25- ಹದಿನೈದನೇ ವಿಧಾನಸಭೆಯ ಕೊನೆಯ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ತನ್ನ ಗೊಂದಲಕಾರಿ ಹಾಗೂ ಇಬ್ಬಂದಿ ನಿಲುವುಗಳಿಂದ ಮತ್ತೊಮ್ಮೆ ವೈಫಲ್ಯ ಅನುಭವಿಸಿದೆ.

ಪ್ರಜಾಪ್ರಭುತ್ವದ ಉನ್ನತಸ್ಥಾಯಿ ಯಾಗಿರುವ ವಿಧಾನಸಭೆ ಮತ್ತು ವಿಧಾನ ಪರಿಷತ್‍ಗಳಲ್ಲಿ ಮೌಲ್ಯಯುತ ಚರ್ಚೆಗಳು ನಡೆಯಬೇಕು, ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂಬ ಆಶಯವಿದೆ. ಆದರೆ ಕಳೆದ ಹನ್ನೊಂದು ದಿನಗಳಿಂದ ನಡೆದು ನಿನ್ನೆ ಮುಕ್ತಾಯವಾದ ಅಧಿವೇಶನದಲ್ಲಿ ಕೆಲ ನಾಯಕರ ವೈಭವೀಕರಣ ಬಿಟ್ಟರೆ ಬೇರೆ ಯಾವ ಫಲಿತಾಂಶಗಳು ದೊರೆಯಲಿಲ್ಲ. ಬಹುತೇಕ ಪ್ರಮುಖ ಮಸೂದೆಗಳು ಸಮಗ್ರ ಚರ್ಚೆಯೇ ಇಲ್ಲದೆ ಅಂಗೀಕಾರಗೊಂಡಿವೆ.

ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಚರ್ಚೆ ಹಾಗೂ ಬಜೆಟ್ ಮೇಲೆ ಹಲವು ನಾಯಕರು ಗಂಟೆ ಗಟ್ಟಲೆ ಭಾಷಣ ಮಾಡಿದ್ದರು, ಅದಕ್ಕೆ ಸರ್ಕಾರದ ಪರವಾಗಿ ಮುಖ್ಯಮಂತ್ರಿಯವರು ಮತ್ತು ಕೆಲ ಸಚಿವರು ಗಂಟೆಗಟ್ಟಲೆ ಪ್ರತ್ಯುತ್ತರ ನೀಡಿ ಸೇಡು ತೀರಿಸಿಕೊಂಡರು. ಅಷ್ಟು ಭಾಷಣಗಳು ವಿಧಾನಮಂಡಲದ ಕಡತದಲ್ಲಿ ದಾಖಲಾಗಿವೆ. ಇದನ್ನು ಬಿಟ್ಟರೆ ಜನ ಸಾಮಾನ್ಯರಿಗೆ ಅದರಿಂದ ಯಾವ ಪ್ರಯೋಜನಗಳು ದಕ್ಕಲಿಲ್ಲ. ಸಮಸ್ಯೆಗಳು ಗಂಭೀರವಾಗಿ ಚರ್ಚೆಯಾಗಲಿಲ್ಲ. ಸರ್ಕಾರ ಅದಕ್ಕೆ ಸ್ಪಂದಿಸಲೂ ಇಲ್ಲ. ಪರಿಗಣಿಸಬಹುದಾದ ಒಂದೇ ಒಂದು ಹೊಸ ಅಂಶಗಳು ಕಾಣಿಸಲಿಲ್ಲ.

ವಿಧಾನಪರಿಷತ್‍ನಲ್ಲಿ ಬಜೆಟ್ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಉತ್ತರ ನೀಡುವಾಗಲಂತೂ ಕಾಂಗ್ರೆಸ್ ಸದಸ್ಯರನ್ನು ಚಿತ್ತಾಗಿಸಿದರು. ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದ ಆಡಳಿತದಲ್ಲಿ ಭ್ರಷ್ಟಚಾರವನ್ನು ಮರೆ ಮಾಚಲು ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಎಸಿಬಿ ರಚನೆ ಮಾಡಲಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು. ಇದಕ್ಕೆ ತಕ್ಕ ಉತ್ತರ ನೀಡಲು ಕೊನೆ ಕೊನೆಗೆ ಕಾಂಗ್ರೆಸ್ ಭಾಗದಲ್ಲಿ ಸಮರ್ಥ ಶಾಸಕರೇ ಇರಲಿಲ್ಲ.

ಮಾಜಿ ಸಚಿವ ಕೆ.ಜೆ.ಜಾರ್ಜ್ ಏಕಾಏಕಿ, ಎದ್ದು ನಿಂತು ಎಸಿಬಿ ರದ್ದು ಮಾಡಿದ್ದ ಹೈಕೋರ್ಟ್ ಆದೇಶ ಸರಿಯಿಲ್ಲ. ಅದನ್ನು ಪ್ರಶ್ನಿಸಿ ಹೈಕೋರ್ಟ್ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಬೇಕಿತ್ತು ಎಂದು ಬಿಟ್ಟರು. ಇದು ಆಡಳಿತ ಪಕ್ಷಕಗಳಿಗೆ ಕಾಂಗ್ರೆಸ್ ಅನ್ನು ಹಂಗಿಸಲು ಹೊಸ ಅಸ್ತ್ರ ನೀಡಿದಂತಾಯಿತ್ತು.

ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ..?

ಸಿದ್ದರಾಮಯ್ಯ ಸರ್ಕಾರ ಭ್ರಷ್ಟಚಾರ ಕಾಯ್ದೆ ಪಾಲನೆಗಾಗಿ ಎಸಿಬಿ ರಚನೆ ಮಾಡಿತ್ತೇ ವಿನಃ, ಲೋಕಾಯುಕ್ತವನ್ನು ಮುಚ್ಚಿರಲಿಲ್ಲ ಎಂಬ ಸತ್ಯವನ್ನು ಜಾರ್ಜ್ ಹೇಳಿದರಾದರೂ, ಆದರೆ ಅದಕ್ಕೆ ಬಿಜೆಪಿಯವರ ಅಬ್ಬರದಲ್ಲಿ ಕಿಮ್ಮತ್ತು ಸಿಗಲೇ ಇಲ್ಲ. ಕಾಂಗ್ರೆಸ್ ಎಸಿಬಿ ಪರವಾಗಿದೆ. ಭ್ರಷ್ಟಚಾರದ ಪ್ರತಿ ಪ್ರಕರಣದಲ್ಲೂ ತನಿಖೆ, ಅಭಿಯೋಜನೆಗೆ ಮುಖ್ಯಮಂತ್ರಿ ಅನುಮತಿ ಪಡೆಯಬೇಕಾದ ಅೀನ ಸಂಸ್ಥೆ ಎಸಿಬಿಯನ್ನು ಇಟ್ಟುಕೊಂಡು ಕಾಂಗ್ರೆಸ್ ತನ್ನ ಭ್ರಷ್ಟಚಾರವನ್ನು ಮುಚ್ಚಿ ಹಾಕಿಕೊಂಡಿತ್ತು ಎಂದು ಬಿಜೆಪಿ ಪಾಳೆಯದ ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಸಚಿವರು ಮುಗಿ ಬಿದ್ದರು.

ಇದನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್‍ನವರಿಗೆ ಸಾಧ್ಯವೇ ಆಗಲಿಲ್ಲ. ಎಸಿಬಿ ಸಮರ್ಥವಾಗಿರಲಿಲ್ಲ ಎಂದು ಹೈಕೋರ್ಟ್ ಛೀಮಾರಿ ಹಾಕಿತ್ತು, ಲೋಕಾಯುಕ್ತ ಮರುಸ್ಥಾಪನೆಯಾಗಬೇಕು, ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂಬ ಜನರ ಮನದಿಂಗಿತಕ್ಕೆ ವಿರುದ್ಧವಾಗಿ ಕಾಂಗ್ರೆಸ್ ನಾಯಕರು ವಿಧಾನಸಭೆಯಲ್ಲಿ ಮಾತನಾಡಿ ಇಕ್ಕಟ್ಟಿಗೆ ಸಿಲುಕಿದರು.

ಕನ್ನಡ ಭಾಷೆಯ ಮೇಲೆ ಅಷ್ಟೇನು ಹಿಡಿತ ಇಲ್ಲದ ಕೆ.ಜೆ.ಜಾರ್ಜ್, ವಿಪಕ್ಷದ ಉಪ ನಾಯಕ ಯು.ಟಿ.ಖಾದರ್ ಮತ್ತಿತರರು ಬಿಜೆಪಿಯ ವಾಗ್ದಾಳಿಯನ್ನು ಎದುರಿಸಲಾಗದೆ ತತ್ತರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರು ಅಧಿವೇಶನದಲ್ಲಿ ಇದ್ದರಾದರೂ ಬಿಜೆಪಿ ಬಾಣಗಳಿಗೆ ಗುರಾಣಿ ಹಿಡಿಯುವಲ್ಲಿ ವಿಫಲರಾದರು.

ಲೋಕಾಯುಕ್ತ, ಎಸಿಬಿಯ ಜಂಜಾಟದಲ್ಲಿ ಕಾಂಗ್ರೆಸ್ ಬಿಜೆಪಿ ಎದುರು ಮುಗ್ಗರಿಸಿತ್ತು. ಪಕ್ಷದ ನಿಲುವುಗಳು ಅಸ್ಪಷ್ಟವಾಗಿದ್ದರಿಂದ ಕಾಂಗ್ರೆಸ್ ಲೋಕಾಯುಕ್ತಕ್ಕೆ ವಿರುದ್ಧವಾಗಿದೆ ಎಂಬ ಅಭಿಪ್ರಾಯ ದಾಖಲಾಯಿತು.
ಇನ್ನೂ ಅರ್ಕಾವತಿ ಬಡಾವಣೆಯ ರಿಡು ಪ್ರಕರಣದಲ್ಲಿ ಕೆಂಪಣ್ಣ ಆಯೋಗದ ವರದಿಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಯವರು, ತಪ್ಪಿತಸ್ಥರನ್ನು ಅಭಿಯೋಜನೆಗೆ ಒಳಪಡಿಸಿ ಜೈಲಿಗೆ ಹಾಕುವುದಾಗಿ ಅದೇ ವೇಳೆ ಘೋಷಣೆ ಮಾಡಿದರು. ಇದು ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತ್ತು.

ಅರ್ಕಾವತಿ ರಿಡು ಪ್ರಕರಣದಲ್ಲಿ ಎಂಟು ಸಾವಿರ ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ಅವೇಶನದಲ್ಲಿ ದಾಖಲಾಯಿತು. ರಿಡು ಸಿದ್ದರಾಮಯ್ಯ ಅವರ ಸರ್ಕಾರ ಸ್ವಯಂ ಪ್ರೇರಿತ ಕ್ರಮವಲ್ಲ, ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರ ಅವಯಲ್ಲಿ ಸಿದ್ದಗೊಂಡಿದ್ದ ಕಡತಕ್ಕೆ ಹೈಕೋರ್ಟ್ ಆದೇಶದ ಮೇರೆಗೆ ಸಿದ್ದರಾಮಯ್ಯ ಸಹಿ ಹಾಕಿದ್ದಾರೆ ಎಂದು ಜಾರ್ಜ್ ಸ್ಪಷ್ಟನೆ ನೀಡಲು ಯತ್ನಿಸಿದಾದರೂ ಅದು ಫಲ ನೀಡಲಿಲ್ಲ.

ರಿಡುನಲ್ಲಿ ಎಂಟು ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಟೀಕಿಸಿತ್ತು. ನಮ್ಮ ಪಕ್ಷದ ನಾಯಕರಿಲ್ಲದಾಗ ನೀವು ಟೀಕೆ ಮಾಡುತ್ತಿರಾ ಎಂದು ಕಲಾಪದಲ್ಲಿದ್ದ ಶಾಸಕರು ಅಸಾಹಯಕರಾಗಿ ಅಳಲು ತೊಡಿಕೊಂಡರು. ಆ ಭಾಗದಲ್ಲಿ ಕ್ಯಾಚ್ ಹಿಡಿಯುವವರಿಲ್ಲ, ಮುಖ್ಯಮಂತ್ರಿ ಹೊಡೆದ ಬಾಲ್‍ಗಳೆಲ್ಲಾ ಸಿಕ್ಸರ್‍ಗಳಾಗುತ್ತಿವೆ ಎಂದು ಜೆಡಿಎಸ್‍ನಿಂದ ಕಾಂಗ್ರೆಸ್‍ನತ್ತ ವಲಸೆ ಬರಲು ಸಿದ್ಧರಾಗಿರುವ ಶಿವಲಿಂಗೇಗೌಡ ವ್ಯಂಗ್ಯವಾಡಿದರು.

ಅಧಿವೇಶನದಲ್ಲಿ ಪ್ರಸ್ತಾಪಿತ ಈ ಎರಡು ವಿಷಯಗಳು ಮುಂದಿನ ವಿಧಾನಸಭೆ ಚುನಾವಣೆಯ ವೇಳೆಗೆ ಬಿಜೆಪಿಗೆ ಪ್ರಬಲ ಅಸ್ತ್ರಗಳಾಗುವ ಸಾಧ್ಯತೆಗಳಿವೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮಾಡಿದ ಆರೋಪಕ್ಕೆ ನಿನ್ನೆ ಸಿದ್ದರಾಮಯ್ಯ ಸದನದ ಹೊರಗೆ ಪತ್ರಿಕಾಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಸದನದ ದಾಖಲೆಗಳಲ್ಲಿ ರಿಡು ಆರೋಪ ದಾಖಲೆಯಾಗಿ ಉಳಿದು ಹೋಗಲಿದೆ.

ಜಾತ್ಯತೀತ ಶಕ್ತಿಗಳ ಜೊತೆ ಹೊಂದಾಣಿಕೆಗೆ ಕಾಂಗ್ರೆಸ್ ಸಿದ್ಧ : ಖರ್ಗೆ

ಅದಕ್ಕೆ ಸಮರ್ಥ ಸ್ಪಷ್ಟನೇ ಇಲ್ಲದೆ ಏಕಮುಖವಾಗಿ ಆರೋಪ ದಾಖಲಾಗಿದೆ. ಗುರುವಾರದ ಕಲಾಪ ನೋಡಿದರೆ ಕಾಂಗ್ರೆಸ್‍ನಲ್ಲಿ ಸಂಸದೀಯ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂದು ಯಾರಿಗಾದೂ ಅರಿವಾಗುತ್ತದೆ. ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಈವರೆಗೂ ಎರಡನೇ ಮತ್ತೂ ಮೂರನೆ ಸಾಲಿನಲ್ಲಿ ಸಮರ್ಥ ಸಂಸದೀಯ ಪಟುಗಳನ್ನು ತಯಾರು ಮಾಡುವಲ್ಲಿ ವಿಫಲವಾಗಿದೆ. ಎಲ್ಲರೂ ಪ್ರಭಾವಿ ನಾಯಕರ ನೆರಳಿನಲ್ಲಿ ರಾಜಕಾರಣ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂಬ ಮರುಕ ಬರುವಂತಿತ್ತು.

ಚುನಾವಣಾ ಪೂರ್ವದಲ್ಲಿ ನಡೆದ ಕೆಲವು ಸಮೀಕ್ಷೆಗಳು ಕಾಂಗ್ರೆಸ್‍ಗೆ ಪೂರಕವಾಗಿವೆ ಎಂಬ ಕಾರಣಕ್ಕೆ ಈಗಾಗಲೇ ಅಕಾರಕ್ಕೆ ಸಿಕ್ಕಂತ ಅಮಲಿನಲ್ಲಿ ತೇಲುತ್ತಿರುವ ಕಾಂಗ್ರೆಸ್ ನಾಯಕರು ಸಣ್ಣದಾದ ಗಂಭೀರ ವಿಚಾರಗಳನ್ನು ನಿರ್ಲಕ್ಷ್ಯಿಸಲಾರಂಭಿಸಿದ್ದಾರೆ. ಅದು ಸಾಮಾಜಿಕವಾಗಿ ಭಾರೀ ಪರಿಣಾಮ ಬೀರಲಾರಂಭಿಸಿದೆ.

ಇನ್ನೂ ವಿಧಾನಪರಿಷತ್‍ನಲ್ಲೂ ಅದೇ ಪರಿಸ್ಥಿತಿ ಇತ್ತು. ಕೊನೆಯ ಕಲಾಪದಲ್ಲಿ ಕಾಂಗ್ರೆಸ್‍ನ ಮೂರ್ನಲ್ಕು ಮಂದಿ ಸದಸ್ಯರಿದ್ದರು. ಬಿಜೆಪಿ ಪಾಳೇಯದಿಂದ ವಾಗ್ಬಾಣಗಳು ಬಂದರೆ ಎದ್ದು ಕಿರುಚಾಡುವುದು ಬಿಟ್ಟರೆ ಬೇರೆನೂ ಚರ್ಚೆಗಳು ನಡೆಯಲಿಲ್ಲ.

ಕಾರ್ಮಿಕರ ದುಡಿಮೆಯ ಅವಯನ್ನು ಹೆಚ್ಚಿರುವ ಕಾರ್ಖಾನೆಗಳ ತಿದ್ದುಪಡಿ ಕಾಯ್ದೆ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಗಳು ವಿಧಾನಸಭೆಯಲ್ಲಿ ಗಂಭೀರ ಚರ್ಚೆಯಿಲ್ಲದೆ ಅಂಗೀಕಾರಗೊಂಡಿದ್ದವು. ವಿಧಾನ ಪರಿಷತ್‍ನಲ್ಲಿ ಪ್ರತಿಪಕ್ಷಗಳ ಅನುಪಸ್ಥಿತಿ ಮತ್ತು ವೈಪಲ್ಯ ಕಂಡು ಚಡಪಡಿಸಿದ ಆಡಳಿತ ಪಕ್ಷ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವರೇ ಕಾರ್ಮಿಕರ ದುಡಿಮೆ ಅವಯನ್ನು ಹೆಚ್ಚಿಸುವುದು ಅನಾಗರೀಕ ಸರ್ಕಾರದ ನಡವಳಿಕೆ ಎಂದು ಟೀಕಿಸಿ ಬಿಟ್ಟರು. ಆಡಳಿತ ಪಕ್ಷದ ಸದಸ್ಯರು ವಿರೋಸಿದರೂ ವಿರೋಧ ಪಕ್ಷ ಕಾಯ್ದೆಯನ್ನು ಟೀಕಿಸುವ ಶಕ್ತಿ ಸಾಮಥ್ರ್ಯ ಅವರಲ್ಲಿ ಇಲ್ಲದೆ ಮೇಲ್ಮನೆಯಲ್ಲಿ ವಿಪಕ್ಷ ಸೊರಗಿ ಹೋಗಿತ್ತು.

ಹಲವು ಹಗರಣಗಳನ್ನು ಮೊದಲಿನಿಂದಲೂ ಕಾಂಗ್ರೆಸ್ ಸದನದ ಹೊರಗೆ ಪ್ರಸ್ತಾಪಿಸಿದಷ್ಟು ವಿಧಾನಮಂಡಲದಲ್ಲಿ ಚರ್ಚಿಸಿ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ವಿಫಲವಾಗಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಒಬ್ಬರ ಕುಟುಂಬಕ್ಕೆ ಆನ್‍ಲೈನ್‍ನಲ್ಲಿ ಲಂಚದ ಹಣ ವರ್ಗಾವಣೆಯಾಗಿದ್ದ ಪ್ರಕರಣದಲ್ಲಿ ಕನಿಷ್ಠ ಒಂದು ಎಫ್‍ಐಆರ್ ದಾಖಲಾಗುವಂತೆ ಮಾಡಲು ಕಾಂಗ್ರೆಸ್‍ಗೆ ಸಾಧ್ಯವಾಗಲಿಲ್ಲ. ಬಿಟ್‍ಕಾಯಿನ್ ಹಗರಣ, ಪಿಎಸ್‍ಐ ನೇಮಕಾತಿ ಹಗರಣ, ಮತದಾರರ ಪಟ್ಟಿ ಪರಿಷ್ಕರಣೆ ಹಗರಣ, ಶೇ.40ರಷ್ಟು ಕಮಿಷನ್ ಆರೋಪ, ಪಠ್ಯಪುಸ್ತಕ ಪರಿಷ್ಕರಣೆ ಸೇರಿದಂತೆ ಹಲವು ವಿಚಾರಗಳು ವಿಧಾನಮಂಡಲದಲ್ಲಿ ತಾರ್ಕಿಕ ಅಂತ್ಯ ಕಾಣಲೇ ಇಲ್ಲ.

ಸಿದ್ದುಗೆ ಕಟುಸತ್ಯ ಎದುರಿಸುವ ಕಾಲ ಬಂದೇ ಬರುತ್ತೇ : ಸಿಎಂ

ಪ್ರತಿಬಾರಿ ಅಧಿವೇಶನ ನಡೆಯುವಾಗ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿ ಪ್ರಚಲಿತ ವಿಷಯಗಳ ಬಗ್ಗೆ ಒಂದಿಷ್ಟು ಚರ್ಚೆಗಳಾಗುತ್ತಿದ್ದವು. ಅದರ ಮೇಲೆ ವಿಧಾನಮಂಡಲದಲ್ಲಿ ಚರ್ಚೆಯಲ್ಲಿ ಕಾಂಗ್ರೆಸ್ ಭಾಗವಹಿಸುತ್ತಿತ್ತು. ಈ ಬಾರಿ ಅಂತಹ ಸಭೆಗಳು ನಡೆಯಲಿಲ್ಲ. ವಿಪಕ್ಷ ಕನಿಷ್ಟ ಸರ್ಕಾರದ ವಿರುದ್ಧ ಒಂದು ನಿಲುವಳಿ ಸೂಚನೆ ಮಂಡಿಸುವಷ್ಟು ಉತ್ಸಾಹವನ್ನು ಉಳಿಸಿಕೊಳ್ಳಲಿಲ್ಲ. ಕಾಂಗ್ರೆಸ್‍ಗೆ ವಿಧಾನಮಂಡಲಕ್ಕಿಂತಲೂ ಜನತಾ ನ್ಯಾಯಾಲಯದ ಮೇಲೆಯೇ ಹೆಚ್ಚು ನಂಬಿಕೆ ಇದ್ದಂತಿದೆ. ಹನ್ನೊಂದು ದಿನಗಳ ಕಲಾಪ ಕೆಲವು ನಾಯಕರ ವೈಭವೀಕರಣದ ವೇದಿಕೆಯಾಗಿ ಮುಕ್ತಾಯಗೊಂಡಿದೆ.

SESSION, OPPOSITION, Congress, BJP government,

Articles You Might Like

Share This Article