ವಾಷಿಂಗ್ಟನ್,ಜ.4-ಕೋವಿಡ್ ವಿಶ್ವಾದ್ಯಂತ ಮತ್ತೊಮ್ಮೆ ಆತಂಕ ಸೃಷ್ಟಿಸುವ ಮಟ್ಟ ತಲುಪಿದ್ದು, ಕೇವಲ 4 ತಿಂಗಳಲ್ಲಿ ಗರಿಷ್ಠ ಪ್ರಕರಣಗಳು ಅಮೆರಿಕದಲ್ಲಿ ದಾಖಲಾಗಿವೆ. ಪ್ರಸ್ತುತ ಒಂದು ಲಕ್ಷಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದು, 18,500 ಮಂದಿ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ತಿಳಿಸಿದೆ.
ಜನವರಿ 14, 2021ರಂದು ಕೋವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 1,42,000ಕ್ಕಿಂತಲೂ ಹೆಚ್ಚಾಗಿತ್ತು. ಇದಾದ ನಂತರ ಸೆಪ್ಟೆಂಬರ್ 11, 2021ರಂದು ಒಂದು ಲಕ್ಷಕ್ಕೆ ಇಳಿಕೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಕೋವಿಡ್ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಯಿತು. ಆದರೆ ಈಗ ಮತ್ತೆ ಒಂದು ಲಕ್ಷ ಮಂದಿ ಆಸ್ಪತ್ರೆಗೆ ದಾಖಲಾಗಿರುವುದು ಆತಂಕ ಸೃಷ್ಟಿಸಿದೆ.
ಸದ್ಯ ಅಮೆರಿಕದ ಆಸ್ಪತ್ರೆಗಳಲ್ಲಿ ಮುಕ್ಕಾಲು ಭಾಗದಷ್ಟು ಹಾಸಿಗೆಗಳು ಭರ್ತಿಯಾಗಿವೆ. ಆಸ್ಪತ್ರೆಯಲ್ಲಿರುವ ಏಳು ಮಂದಿ ರೋಗಿಗಳಲ್ಲಿ ಓರ್ವ ಕೋವಿಡ್ 19 ರೋಗಿ ಇರುತ್ತಾನೆ ಎಂದು ಅಂಕಿಅಂಶ ಬಹಿರಂಗಪಡಿಸಿದೆ. ತೀವ್ರ ನಿಗಾ ಘಟಕದಲ್ಲಿ 18,200ಕ್ಕೂ ಹೆಚ್ಚು ಕೊರೊನಾ ಸೋಂಕಿನ ರೋಗಿಗಳು ಶೇ.78ರಷ್ಟು ತೀವ್ರ ನಿಗಾ ಘಟಕದ ಹಾಸಿಗೆಗಳು ಭರ್ತಿಯಾಗಿವೆ.
ಅವುಗಳಲ್ಲಿ ಶೇ.25ರಷ್ಟು ಹಾಸಿಗೆಗಳು ಕೋವಿಡ್ ರೋಗಿಗಳಿಂದ ತುಂಬಿವೆ. ನ್ಯೂಜರ್ಸಿ ಒಹಿಯೋ ಮತ್ತು ಡೆಲೆವರ್‍ನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ಒಂದು ಲಕ್ಷ ಜನರಿಗೆ 50ಕ್ಕೂ ಹೆಚ್ಚು ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ, ಅಲಸ್ಕಾ ಮತ್ತು ವ್ಯೋಮಿಂಗ್‍ನಲ್ಲಿ ಒಂದು ಲಕ್ಷ ಮಂದಿಯಲ್ಲಿ 10ರಷ್ಟು ಮಂದಿ ದಾಖಲಾಗಿದ್ದಾರೆ.
ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ನೀಡಿದ ಮಾಹಿತಿ ಪ್ರಕಾರ ಡಿಸೆಂಬರ್ ಕೊನೆ ವಾರದಲ್ಲಿ ಪ್ರತಿ ದಿನ 500ಕ್ಕೂ ಹೆಚ್ಚು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತಿದೆ. ಸದ್ಯಕ್ಕೆ 2ರಿಂದ 15 ವರ್ಷದ ಮಕ್ಕಳಿಗೆ ಫೈಜರ್ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಗೆ ಅಮೆರಿಕದಲ್ಲಿ ಅನುಮತಿ ನೀಡಲಾಗಿದೆ.
