ಬೆಂಗಳೂರು, ಜೂ.6- ಬಹುನಿರೀಕ್ಷಿತ ಗೃಹಜ್ಯೋತಿ ಸೇರಿದಂತೆ ಪಂಚಖಾತ್ರಿ ಯೋಜನೆಗಳ ಸೌಲಭ್ಯ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತಿದ್ದು, ಈ ವೆಬ್‍ಸೈಟ್ ಬಳಕೆಯೇ ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿದೆ. ಬೆಂಗಳೂರು ಸಿಲಿಕಾನ್ ಸಿಟಿ ಎಂಬ ಹೆಸರು ಪಡೆದಿದ್ದರೂ ಕೂಡ ರಾಜ್ಯದ ಜನ ತಂತ್ರಜ್ಞಾನದ ಬಳಕೆಯಲ್ಲಿ ಪೂರ್ಣಪ್ರಮಾಣದ ಸಾಕ್ಷರರಾಗಿಲ್ಲ. ಗ್ರಾಮೀಣಭಾಗದಲ್ಲಿ ಈವರೆಗೂ ಸರ್ಕಾರಿ ವೆಬ್‍ಸೈಟ್‍ಗಳ ವೀಕ್ಷಣೆಗೂ ಜನಸಾಮಾನ್ಯರು ಮುಂದಾಗಿಲ್ಲ.
ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್‍ಬುಕ್‍ನಂತರ ಸುಲಭ ಆ್ಯಪ್‍ಗಳಲ್ಲಿ ಸಕ್ರಿಯರಾಗಿದ್ದಾರೆ. ಸೇವಾಸಿಂಧು ಪೋರ್ಟಲ್ ಬಳಕೆ ವಿದ್ಯಾವಂತರಿಗೆ ಸಾಕಷ್ಟು ಗೊಂದಲ ಮೂಡಿಸುತ್ತದೆ. ಪೋರ್ಟಲ್‍ನಲ್ಲಿ ಸುಮಾರು 70ಕ್ಕೂ ಹೆಚ್ಚು ಪುಟಗಳಿವೆ. ಪ್ರತಿ ಪುಟದಲ್ಲೂ ಐದರಿಂದ ಆರು ಇಲಾಖೆಗಳ ಸೇವೆಯ ಬಗ್ಗೆ ಲಿಂಕ್‍ಗಳಿವೆ. ಆ ಲಿಂಕ್‍ಗಳನ್ನು ಅನುಸರಿಸಿ ಹೋದರೆ ಬಹಳಷ್ಟು ನಿಷ್ಕ್ರಿಯವಾಗಿವೆ.
ಸಾಮಾಜಿಕ ಭದ್ರತಾ ಯೋಜನೆ ನೀಡಿ ಪಿಂಚಣಿ ಯೋಜನೆಗಳಿಗೆ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕಾದರೆ ಸುಮಾರು 70 ಲಿಂಕ್‍ಗಳನ್ನು ತಡಕಾಡಬೇಕಿದೆ. ಅಷ್ಟೊಂದು ತಾಳ್ಮೆ ಮತ್ತು ವ್ಯವಧಾನ ಯಾರಿಗೂ ಇರುವುದಿಲ್ಲ. ಹೀಗಾಗಿ ಸೇವಾ ಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಿದೆ.
ಬಾಡಿಗೆ ಮನೆಗಳಿಗೂ ಉಚಿತ ವಿದ್ಯುತ್, ಆದರೆ ಕಂಡೀಷನ್ ಅಪ್ಲೈ
ಸರ್ಕಾರ ಜನರಿಗೆ ಸೌಲಭ್ಯಗಳನ್ನು ತಲುಪಿಸಬೇಕೆಂಬ ಪ್ರಾಮಾಣಿಕ ಇಚ್ಛಾಶಕ್ತಿ ಹೊಂದಿದ್ದೇ ಆಗಿದ್ದರೆ ಇಂತಹ ಮಹತ್ವದ ಪೋರ್ಟಲ್‍ಗಳನ್ನು ಸರಳ ಹಾಗೂ ಸುಧಾರಿತ ವ್ಯವಸ್ಥೆಯಲ್ಲಿ ಲಭ್ಯವಾಗುವಂತೆ ಮಾಡಬಹುದಿತ್ತು. ಐಟಿಬಿಟಿಯಲ್ಲಿ ದೇಶದಲ್ಲಿ ನಂ.1 ರಾಜ್ಯವಾಗಿರುವ ಕರ್ನಾಟಕಕ್ಕೆ ಜನಸ್ನೇಹಿಯಾದ ಪೋರ್ಟಲ್ ಅನ್ನು ರೂಪಿಸುವುದು ಕಷ್ಟಸಾಧ್ಯವಾಗಿರಲಿಲ್ಲ.
ಆದರೆ ಉದ್ದೇಶಪೂರ್ವಕವಾಗಿಯೇ ಜನರನ್ನು ಗೊಂದಲಕ್ಕೀಡು ಮಾಡಲು ಈ ರೀತಿಯ ವ್ಯವಸ್ಥೆಯನ್ನು ಕಾಯ್ದುಕೊಳ್ಳಲಾಗಿದೆ ಎಂಬ ಆರೋಪಗಳಿವೆ. ಪಂಚಖಾತ್ರಿ ಯೋಜನೆಗಳ ಪೈಕಿ ಗೃಹಜ್ಯೋತಿಗೆ ಸೇವಾ ಸಿಂಧು ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಸೌಲಭ್ಯಕ್ಕೆ ಸಾರಿಗೆ ಸಂಸ್ಥೆಗಳು ಹಾಗೂ ಸೇವಾಸಿಂಧು ಆ್ಯಪ್‍ಗಳ ಮೂಲಕ ಮಾಹಿತಿ ಕಲೆ ಹಾಕಲಾಗುವುದು. ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಗೂ ಸೇವಾಸಿಂಧು ಪೋರ್ಟಲ್ ಪೂರಕವಾಗಿರಲಿದೆ ಎಂಬ ಮಾಹಿತಿಗಳಿವೆ.
ಕೋಟ್ಯಂತರ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಈ ಪೋರ್ಟಲ್ ಎಲೆಕ್ಟ್ರಾನಿಕ್ ಸಾಕ್ಷರರಿಗೆ ದುರಸ್ತವಾಗಿರುವಾಗ ಹಿರಿಯರು, ಅನಕ್ಷರಸ್ಥರು, ಬಡವರು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಬಿಜೆಪಿ ಸರ್ಕಾರದ ಹಗರಣಗಳ ತನಿಖೆಗೆ ಮುಂದಾದ ಗ್ಯಾರಂಟಿ ಸರ್ಕಾರ
ಅರ್ಜಿ ನಮೂನೆಗಳನ್ನು ಬೌದ್ಧಿಕ ಹಾಗೂ ಭೌತಿಕ ಉಭಯ ಮಾದರಿಗಳಲ್ಲೂ ದೊರೆಯುವಂತೆ ಮಾಡುವುದಾಗಿ ಸರ್ಕಾರದ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಆದರೆ ಭೌತಿಕ ಮಾದರಿಯಲ್ಲಿ ಅರ್ಜಿ ಸಲ್ಲಿಸಬೇಕಾದರೆ ಜನಸಾಮಾನ್ಯರು ಸೇವಾಕೇಂದ್ರಗಳು ಹಾಗೂ ಸರ್ಕಾರಿ ಕಚೇರಿಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಿದೆ. ಆಧುನಿಕ ತಂತ್ರಜ್ಞಾನದಲ್ಲಿ ವರ್ಚುಯಲ್ ಮಾದರಿಯ ಅರ್ಜಿ ಸಲ್ಲಿಕೆ ಸುಲಭ ಸಾಧ್ಯವಾಗಿದೆ. ಆದರೆ ಅದಕ್ಕೆ ಬೇಕಾದಂತಹ ವ್ಯವಸ್ಥೆಗಳನ್ನು ಸರ್ಕಾರ ಮಾಡಿಕೊಡಬೇಕಿದೆ. ಸೇವಾ ಸಿಂಧು ಆ್ಯಪ್‍ನಲ್ಲಿ ನಿರ್ದಿಷ್ಟ ಸೇವೆ ಮತ್ತು ಇಲಾಖೆಗಳ ಹುಡುಕಾಟ ಸೇರಿದಂತೆ ಇತರ ಸರಳೀಕರಣ ವ್ಯವಸ್ಥೆಗಳನ್ನು ಅಳವಡಿಸುವ ಅಗತ್ಯವಿದೆ. ನೊಂದಾವಣೆಯ ವೇಳೆ ಸಂಗ್ರಹಿಸಲಾಗುವ ಮಾಹಿತಿಯ ಗೌಪ್ಯತೆ ಪಾಲನೆಗೆ ಆದ್ಯತೆ ನೀಡಬೇಕಿದೆ.
#sevasindhu, #portal, #congressguarantee,