ಬೆಂಗಳೂರು, ಫೆ.11- ಹಗಲು ಮತ್ತು ರಾತ್ರಿ ವೇಳೆ ಮನೆಗಳ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಹಾಗೂ ಸರಗಳ್ಳತನ ಮಾಡುತ್ತಿದ್ದ ಏಳು ಮಂದಿಯನ್ನು ಉತ್ತರ ವಿಭಾಗದ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿ 45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 21 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿಕ್ಷಕಿಯೊಬ್ಬರು ಜ.10ರಂದು ಮಧ್ಯಾಹ್ನ 3.35ರ ಸುಮಾರಿನಲ್ಲಿ ಶಾಲೆ ಮುಗಿಸಿಕೊಂಡು ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸಿ ಹೆಸರಘಟ್ಟ ಮುಖ್ಯರಸ್ತೆ ವಿಡಿಯೋ ಬಸ್ ನಿಲ್ದಾಣದ ಬಳಿ ಇಳಿದು ಟಿ.ದಾಸರಹಳ್ಳಿಯ ಭುವನೇಶ್ವರಿ ನಗರದಲ್ಲಿರುವ ಮನೆಗೆ ನಡೆದುಕೊಂಡು ಹೋಗುತ್ತಿದ್ದರು.
ಆ ಸಂದರ್ಭದಲ್ಲಿ ಇಬ್ಬರು ಸರಗಳ್ಳರು ದ್ವಿಚಕ್ರ ವಾಹನದಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದು 50 ಗ್ರಾಂ ತೂಕದ ಮಾಂಗಲ್ಯಸರ ಎಗರಿಸಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಗೆ ಶಿಕ್ಷಕಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸಿಪಿ ನಾಗೇಗೌಡ ಮಾರ್ಗದರ್ಶನದಲ್ಲಿ ಬಾಗಲಗುಂಟೆ ಠಾಣೆ ಇನ್ಸ್‍ಪೆಕ್ಟರ್ ಸುನಿಲ್ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು ಇಬ್ಬರು ಆರೋಪಿಗಳನ್ನು ಮೊದಲು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದಲ್ಲಿ ಇನ್ನೂ ಐದು ಮಂದಿ ಭಾಗಿಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ತನಿಖೆ ಮುಂದುವರೆಸಿ ಅವರನ್ನೂ ಬಂಧಿಸಿದ್ದಾರೆ.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 45 ಲಕ್ಷ ಬೆಲೆಬಾಳುವ 332 ಗ್ರಾಂ ತೂಕದ ಚಿನ್ನಾಭರಣ, 50 ಸಾವಿರ ಹಣ ಹಾಗೂ ಕಳ್ಳತನ ಮಾಡಿದ್ದ ವಿವಿಧ ಕಂಪೆನಿಯ 21 ದ್ವಿಚಕ್ರ ವಾಹನಗಳು ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳು, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಬಾಗಲಗುಂಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಮುಖ ಆರೋಪಿಯು 2018ನೆ ಸಾಲಿನಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆಯ ಹಸು ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದು, ಈತ ಇತರ ಆರೋಪಿಗಳ ಜತೆ ಸೇರಿ ಸರಗಳ್ಳತನ, ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದುದು ಹಾಗೂ ಹಗಲು-ರಾತ್ರಿ ವೇಳೆ ಮನೆಗಳ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದಾಗಿ ವಿಚಾರಣೆಯಿಂದ ತಿಳಿದುಬಂದಿದೆ.
ಉಳಿದ ಮೂವರು ಆರೋಪಿಗಳು ಸರಗಳ್ಳತನ ಕೃತ್ಯ ನಡೆಸುವ ಮುಂಚೆ ವಿವಿಧ ಪ್ರದೇಶಗಳಲ್ಲಿ ಸುತ್ತಾಡಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರುತಿಸಿ ನಂತರ ಇಬ್ಬರು ಪ್ರಮುಖ ಆರೋಪಿಗಳೊಂದಿಗೆ ಸೇರಿ ಸರಗಳನ್ನು ಎಗರಿಸುತ್ತಿದ್ದರು.
ಈ ಪ್ರಕರಣಗಳಲ್ಲಿ ಏಳು ಮತ್ತು ಎಂಟನೆ ಆರೋಪಿಗಳು ಪ್ರಮುಖ ಆರೋಪಿಯ ಸಂಬಂಕರಾಗಿದ್ದು, ಕೃತ್ಯ ನಡೆಸಲು ಸಹಕರಿಸುತ್ತಿದ್ದರು.
ಕಳವು ಮಾಡಿದ ಮಾಲನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದರೆಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ತಲೆಮರೆಸಿ ಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಕಾರ್ಯ ಮುಂದುವರೆದಿದೆ.
ಆರೋಪಿಗಳ ಬಂಧನದಿಂದ ಬಾಗಲಗುಂಟೆ, ನೆಲಮಂಗಲ ಗ್ರಾಮಾಂತರ, ಪೀಣ್ಯ, ಕಾಮಾಕ್ಷಿಪಾಳ್ಯ, ಪುಟ್ಟೇನಹಳ್ಳಿ, ಹೆಣ್ಣೂರು, ರಾಜಗೋಪಾಲನಗರ, ಸೋಲದೇವನಹಳ್ಳಿಯ ತಲಾ ಒಂದು ಪ್ರಕರಣ ಮತ್ತು ಮಾದನಾಯಕನಹಳ್ಳಿ ಠಾಣೆಯ ಆರು ಪ್ರಕರಣಗಳು
ಸೇರಿದಂತೆ ಒಟ್ಟು 30 ಪ್ರಕರಣಗಳು ಪತ್ತೆಯಾಗಿವೆ.
