ಭಾರೀ ಮಳೆಯಿಂದ ಹೊಲ-ಗದ್ದೆ ಜಲಾವೃತ, ಕಂಗಾಲಾದ ರೈತ

Social Share

ಬೆಂಗಳೂರು,ಆ.9- ಕರಾವಳಿ, ಮಲೆನಾಡು ಹೊರತುಪಡಿಸಿ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಮಳೆ ಅಬ್ಬರ ತಗ್ಗಿದೆ. ಆದರೆ ಬಹುತೇಕ ಕೆರೆಕಟ್ಟೆ, ನದಿ, ಜಲಾಶಯಗಳು ಭರ್ತಿಯಾಗಿರುವುದರಿಂದ ನದಿಪಾತ್ರದಲ್ಲಿ ಪ್ರವಾಹ ಉಂಟಾಗಿ, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ತುಂಬಳ್ಳಿಪುರದಲ್ಲಿ ಕಾಫಿ ತೋಟ ನಾಶವಾಗಿದೆ. ಕೊಪ್ಪ-ಶೃಂಗೇರಿ ಹೆದ್ದಾರಿಯ ಉಳುಮೆ ಎಂಬಲ್ಲಿ ಬಿರುಕು ಕಾಣಿಸಿಕೊಂಡು ಕುಸಿಯುವ ಭೀತಿ ಎದುರಾಗಿದೆ. ರಾಯಚೂರು, ಕಲಬುರಗಿಯಲ್ಲಿ ಅತಿವೃಷ್ಟಿ ಉಂಟಾಗಿದೆ.

ಭದ್ರಾವತಿ ತಾಲ್ಲೂಕಿನ ಕಾಚಿಗೊಂಡನಹಳ್ಳಿಯಲ್ಲಿ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಬೈಂದೂರು ಸಮೀಪದ ಕಾಲ್ತೋಡು ಗ್ರಾಮದ ಬಿಜಮಕ್ಕಿ ಬಳಿ ಶಾಲೆಯಿಂದ ಮರಳುತ್ತಿದ್ದ 2ನೇ ತರಗತಿ ವಿದ್ಯಾರ್ಥಿನಿ ಕಾಲುಸಂಕ ದಾಟುವಾಗ ಆಯತಪ್ಪಿ ಹಳ್ಳದಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾಳೆ.

ಬೆಳಗಾವಿಯಲ್ಲೂ ಭಾರೀ ಮಳೆಯಿಂದ ಮನೆ ಕುಸಿತ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಉಂಟಾಗಿದೆ.
ಬೆಳಗಾವಿ, ಚಿಕ್ಕೋಡಿ, ಖಾನಾಪುರ, ಕಾರವಾರ, ಶಿರಸಿ, ಸಿದ್ದಾಪುರ, ಕುಮ್ಟಾ, ಭಟ್ಕಳ, ಬೈಂದೂರು, ಹೊಸನಗರ, ಶಿವಮೊಗ್ಗ, ಕಾರ್ಕಳ, ಬೆಳ್ತಂಗಡಿ, ಮಡಿಕೇರಿ, ವಿರಾಜಪೇಟೆ, ಸಕಲೇಶಪುರ, ಕೊಪ್ಪ, ಶೃಂಗೇರಿ, ಚಿಕ್ಕಮಗಳೂರಿನಲ್ಲಿ ಅಧಿಕ ಮಳೆಯಾಗಿದ್ದು, ರಾಜ್ಯದ ಉಳಿದಂತೆ ಹಗರು ಮಳೆಯಾಗಿದೆ. ಬಹುತೇಕ ಒಳನಾಡಿನಲ್ಲಿ ಮಳೆ ಬಿಡುವು ಕೊಟ್ಟಂತಾಗಿದೆ.

ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳು ಭರ್ತಿಯಾಗಿದ್ದು, ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಹೇಮಾವತಿ, ಕಾವೇರಿ, ಕಪಿಲಾ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನದಿಯ ಇಕ್ಕೆಲಗಳ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿವೆ.

ಪಾಂಡವಪುರ, ಶ್ರೀರಂಗಪಟ್ಟಣ ತಾಲ್ಲೂಕಿನ 40 ಗ್ರಾಮಗಳು ಪ್ರವಾಹ ಭೀತಿ ಎದುರಿಸುವಂತಾಗಿದೆ. ಕೆಆರ್ ಎಸ್‍ನಿಂದ 96 ಸಾವಿರ ಕ್ಯೂಸೆಕ್ಸ್ , ಹೇಮಾವತಿಯಿಂದ 29 ಸಾವಿರ, ಕಬಿನಿನಿಂದ 20 ಸಾವಿರ, ಹಾರಂಗಿಯಿಂದ 16 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ.

ಭದ್ರಾ ಜಲಾಶಯದಿಂದ 41 ಸಾವಿರ, ತುಂಗಭದ್ರ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ಸ್‍ಗೂ ಹೆಚ್ಚು ನೀರು ಹೊರಬಿಡಲಾಗಿದೆ. ಇದರಿಂದ ಹಂಪಿ ಸ್ಮಾರಕಗಳು ಜಲಾವೃತವಾಗಿವೆ. ಬಸವಸಾಗರ ಜಲಾಶಯದಿಂದಲೂ ಕೃಷ್ಣಾನದಿಗೆ ಭಾರೀ ಪ್ರಮಾಣದ ನೀರನ್ನು ಬಿಡಲಾಗಿದೆ.

ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಮಳೆ ಇಳಿಕೆಯಾಗಿದ್ದರೂ ಪ್ರವಾಹ ಮಾತ್ರ ನಿಂತಿಲ್ಲ. ಒಳನಾಡಿನಲ್ಲೂ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿಬಿದ್ದಿವೆ. ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ ಕರಾವಳಿ ಮತ್ತು ಮಲೆನಾಡು ಭಾಗದ ಕೆಲವು ಕಡೆ ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ. ಆದರೆ ಒಳನಾಡಿನಲ್ಲಿ ಮಳೆ ಪ್ರಮಾಣ ಇಳಿಮುಖವಾಗಲಿದೆ.

ಇನ್ನು ಕೆಲವು ದಿನಗಳ ಕಾಲ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದ ಕಳೆದೆಂಟತ್ತು ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆಯಾಗಿತ್ತು.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಒಳನಾಡಿನಲ್ಲಿ ಇನ್ನೆರಡು ದಿನ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಆ.15ರವರೆಗೂ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಆಗಾಗ್ಗೆ ಬಲವಾದ ಮೇಲ್ಮೈ ಗಾಳಿ ಬೀಸಲಿದೆ. ಆ.12ರ ನಂತರ ಬಿಸಿಲಿನ ಪ್ರಮಾಣ ಹೆಚ್ಚಾಗಲಿದ್ದು, ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಪ್ರಕಾಶ್ ಹೇಳಿದರು.

Articles You Might Like

Share This Article