ಚುಟುಕು ವಿಶ್ವಕಪ್‍ನಲ್ಲಿ ಶಮಿ, ಸಿರಾಜ್, ಠಾಕೂರ್‌ಗೆ  ಅವಕಾಶ

Social Share

ನವದೆಹಲಿ, ಅ.12- ಕಾಂಗರೂ ನಾಡಿನಲ್ಲಿ ನಡೆಯಲಿರುವ 8ನೆ ಚುಟುಕು ವಿಶ್ವಕಪ್‍ಗೆ ದಿನಗಣನೆ ಶುರುವಾಗಿರುವಾಗಲೇ ಭಾರತದ ತಂಡದಲ್ಲಿ ಗಾಯಾಳುಗಳ ಸಮಸ್ಯೆ ಹೆಚ್ಚಾಗುತ್ತಾ ಸಾಗುತ್ತಿದೆ.

ತಂಡದ ಪ್ರಮುಖ ವೇಗಿ ಜಸ್‍ಪ್ರೀತ್ ಬೂಮ್ರಾ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದರು, ಅವರು ಇನ್ನೂ ಸಂಪೂರ್ಣವಾಗಿ ಫಿಟ್ನೆಸ್‍ಗೊಳ್ಳದ ಕಾರಣ ವಿಶ್ವಕಪ್‍ನಿಂದಲೂ ಹೊರ ನಡೆದಿದ್ದಾರೆ.

ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಬೌಲರ್ ಎಂದು ಗುರುತಿಸಿಕೊಂಡಿದ್ದ ನೆಟ್ ಬೌಲರ್ ದೀಪಕ್ ಚಹರ್ ಕೂಡ ಗಾಯಗೊಂಡು ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದರು, ಚಹರ್‍ರ ಗಾಯದ ಸಮಸ್ಯೆ ಗಂಭೀರವಾಗಿರುವುದರಿಂದ ಚುಟುಕು ವಿಶ್ವಕಪ್‍ನಿಂದ ಹೊರಗುಳಿದಿದ್ದಾರೆ.

ಬೂಮ್ರಾ, ಚಹರ್‍ರ ಅನುಪಸ್ಥಿತಿಯಲ್ಲೂ ವೇಗದ ಬಲವನ್ನು ಹೆಚ್ಚಿಸುವ ಸಲುವಾಗಿ ಬಿಸಿಸಿಐ ಹಿರಿಯ ವೇಗಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್‍ರನ್ನು ರಿಸರ್ವ್ ಆಟಗಾರರಾಗಿ ಆಯ್ಕೆ ಮಾಡಿದ್ದು ನಾಳೆ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.

ಬುಮ್ರಾರ ಸ್ಥಾನವನ್ನು ತುಂಬಬಲ್ಲ ಸಮರ್ಥ ಬೌಲರ್ ಎಂದರೆ ಅದು ಮೊಹಮ್ಮದ್ ಶಮಿ ಎಂಬುದು ಈಗಾಗಲೇ ಕ್ರಿಕೆಟ್ ಪಂಡಿತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ಸರಣಿ ಆರಂಭಕ್ಕೂ ಮುನ್ನ ಕೊರೊನಾ ದಿಂದ ಬಳಲಿದ್ದು, ಈಗ ಅವರು ಸಂಪೂರ್ಣವಾಗಿ ಚೇತರಿಸಿ ಕೊಂಡಿದ್ದು ಬೆಂಗಳೂರಿನಲ್ಲಿರುವ ಎನ್‍ಎಸಿಯ ಅಕಾಡೆಮಿಯಿಂದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರಿಂದ ವಿಶ್ವಕಪ್‍ನ ಭಾರತದ 15 ತಂಡದ ಸದಸ್ಯರಲ್ಲಿ ಶಮಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.

ಶಮಿಗೆ ಆಸ್ಟ್ರೇಲಿಯಾದ ವೇಗದ ಪಿಚ್‍ಗಳ ಬಹುತೇಕ ಪರಿಚಯವಿರುವುದರಿಂದ ಅವರನ್ನೇ ಬೂಮ್ರಾರ ಸ್ಥಾನವನ್ನು ತುಂಬಬಲ್ಲ ಬೌಲರ್ ಎಂಬುದು ಖಚಿತವಾಗಿದೆ. ಮೊಹಮ್ಮದ್ ಸಿರಾಜ್ ಕೂಡ ಆಸ್ಟ್ರೇಲಿಯಾ ಪಿಚ್‍ಗಳಲ್ಲಿ ಉತ್ತಮ ಪ್ರದರ್ಶನ ತೋರಿರುವುದಲ್ಲದೆ ದಕ್ಷಿಣ ಆಫ್ರಿಕಾದ ಏಕದಿನ ಸರಣಿಯಲ್ಲಿ ಆಡಿದ 3 ಪಂದ್ಯಗಳಲ್ಲಿ 5 ವಿಕೆಟ್ ಕಬಳಿಸಿ ಸರಣಿ ಶ್ರೇಷ್ಠ ಆಗುವ ಮೂಲಕ ಬಿಸಿಸಿಐನ ಗಮನ ಸೆಳೆದಿರುವ ಸಿರಾಜ್ ಕೂಡ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಶಮಿಗೆ ಪೈಪೋಟಿ ನೀಡಲಿದ್ದಾರೆ.

ಶಾರ್ದೂಲ್ ಠಾಕೂರ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದು, ವೇಗದ ಪಿಚ್‍ಗಳಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ನಿಸ್ಸೀಮರಾಗಿದ್ದು ಅಲ್ಲದೆ ಬ್ಯಾಟಿಂಗ್‍ನಲ್ಲೂ ತಂಡಕ್ಕೆ ನೆರವಾಗುವುದರಿಂದ ಶಾರ್ದೂಲ್ ಠಾಕೂರ್ ಕೂಡ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು.

ಆಸ್ಟ್ರೇಲಿಯಾದ ಬೌನ್ಸಿ ಪಿಚ್‍ಗಳು ವೇಗದ ಬೌಲರ್‍ಗಳಿಗೆ ಸಹಕಾರ ನೀಡುವುದರಿಂದ ಶಮಿ, ಸಿರಾಜ್ ಹಾಗೂ ಠಾಕೂರ್‍ಗೆ ಬಿಸಿಸಿಐ ಬುಲಾವ್ ಕೊಟ್ಟಿದ್ದರೂ ಕೂಡ ತಂಡದಲ್ಲಿ ಯಾರೂ ಸ್ಥಾನ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕು.

Articles You Might Like

Share This Article