ಮುಂಬೈ, ಫೆ.23- ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದರಿಂದ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗದಿಂದ ತೊಂದರೆಗೊಳಗಾಗಿದ್ದಾರೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯವು ಪ್ರಶ್ನಿಸಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಪಕ್ಷದ ನಾಯಕ ಮಲಿಕ್ ಅವರು “ಬಹಿರಂಗವಾಗಿ ಮಾತನಾಡುವುದರಿಂದ” ಅಂತಹ ಕ್ರಮವನ್ನು ಎನ್ಸಿಪಿ ನಿರೀಕ್ಷಿಸಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಳಿಗ್ಗೆ ಸಚಿವರ ನಿವಾಸಕ್ಕೆ ಬಂದು ಕರೆದುಕೊಂಡು ಹೋಗಿದ್ದಾರೆ. ಅವರು ಭಯಪಡುವುದಿಲ್ಲ ಮತ್ತು ತಲೆಬಾಗುವುದಿಲ್ಲ ಎಂದು ಹೇಳಿದರು.
ಕೇಂದ್ರದ ವಿರುದ್ಧ ಅಥವಾ ಬಿಜೆಪಿ ವಿರುದ್ಧ ಮಾತನಾಡುವುದರಿಂದ ಮಲಿಕ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪವಾರ್, ಮುಸ್ಲಿಂರಿದ್ದರೆ ಅವರೊಂದಿಗೆ ದಾವೂದ್ ಇಬ್ರಾಹಿಂ ಹೆಸರು ಥಳುಕು ಹಾಕಿ ಪ್ರಕರಣ ದಾಖಲಿಸಲಾಗುತ್ತದೆ. ಆದರೆ ದಾವೂದ್ ಜೊತೆ ನವಾಬ್ ಅವರಿಗೆ ಯಾವುದೇ ಸಂಬಂಧವಿಲ್ಲ. 90 ರ ದಶಕದಲ್ಲಿ ತಾವು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ರೀತಿ ಗುರಿ ಮಾಡಲಾಗಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.
ಇಪ್ಪತ್ತೈದು ವರ್ಷಗಳು ಕಳೆದಿವೆ. ಈಗಲೂ ಮಾನಹಾನಿ ಮಾಡಲು, ತೊಂದರೆ ನೀಡಲು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಭೂಗತಲೋಕದ ಹೆಸರು ಬಳಕೆ ಮಾಡಲಾಗುತ್ತಿದೆ. ಕೇಂದ್ರದ ವಿರುದ್ಧ ನಿಲುವು ತೆಗೆದುಕೊಳ್ಳುವ ಜನರು ತನಿಖಾ ಸಂಸ್ಥೆಗಳಿಂದ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.
