ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ, ಶಾಸಕರ ಸಭೆ ಕರೆಯಲು ಶರವಣ ಆಗ್ರಹ

Social Share

ಬೆಂಗಳೂರು, ನ.15-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುಂಡಿ ಮುಚ್ಚಲು ಕೊಟ್ಟಿದ್ದ ಗಡುವು ಇಂದಿಗೆ ಅಂತ್ಯವಾಗಿದ್ದು, ಬೆಂಗಳೂರು ತುಂಬೆಲ್ಲ ಮೃತ್ಯು ಸ್ವರೂಪಿ ಗುಂಡಿ ಗಟಾರಗಳು ರಾಚುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಉಪನಾಯಕ ಟಿ. ಎ. ಶರವಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದೊಂದು ಸುಳ್ಳು ಹೇಳುವ ಸರ್ಕಾರ, ಅಪ್ಪಟ ದಪ್ಪ ಚರ್ಮದ ಜನದ್ರೋಹಿ ಪಾಲಿಕೆ ಎಂದು ಅವರು ಪ್ರಕಟಣೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.ನಿಗದಿತ ಗಡುವಿನಲ್ಲಿ ಗುಂಡಿಗಳನ್ನು ಮುಚ್ಚದ ಅಧಿಕಾರಿಗಳ ಪಟ್ಟಿ ಮಾಡಿ ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಎಂದು ಅವರು ಒತ್ತಾಯಿಸಿದ್ದಾರೆ. ಪಾಲಿಕೆಯ ಬೇಜವಾಬ್ದಾರಿತನಕ್ಕೆ ನಿನ್ನೆ ಇನ್ನೊಂದು ಬಲಿಯಾಗಿದೆ.

ಗುಂಡಿಗಳಿಂದಾಗಿ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಇವು ಅಪಘಾತಗಳಲ್ಲ. ಸರ್ಕಾರ, ಪಾಲಿಕೆಯ ನಿರ್ಲಕ್ಷದ ಕಾರಣಕ್ಕೆ ನಡೆಯುತ್ತಿರುವ ರಸ್ತೆ ಹತ್ಯೆಗಳಾಗಿವೆ ಎಂದು ಕಿಡಿಕಾರಿದ್ದಾರೆ.ಗಡುವಿಗೆ ಬದ್ದವಾಗಿ ಕಾರ್ಯನಿರ್ವಹಿಸದ ಆಧಿಕಾರಿಗಳನ್ನು ಅಮಾನತು ಮಾಡಿ ಎಂದು ಆಗ್ರಹಿಸಿದ್ದಾರೆ.

ಏಳು ಮಂದಿ ಮಂತ್ರಿಗಳು ನಗರದವರಾಗಿದ್ದು, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬೆಂಗಳೂರು ಉಸ್ತುವಾರಿ ವಹಿಸಿದ್ದರೂ, ಹೇಳುವವರು, ಕೇಳುವವರು ಇಲ್ಲದಂತಾಗಿದೆ. ದಿಕ್ಕು ತಪ್ಪಿರುವ ಬೆಂಗಳೂರು ರಸ್ತೆಗಳಲ್ಲಿ ಸಂಭವಿಸಿರುವ ಈ ಸಾವುಗಳಿಗೆ ಸರ್ಕಾರವೇ ಹೊಣೆ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿಗಳು ತಕ್ಷಣ ಚುನಾಯಿತ ಪ್ರತಿನಿಧಿಗಳ ಸಭೆ ಕರೆಯಬೇಕು. ಬೆಂಗಳೂರಿನ ಎಲ್ಲ ವಿಧಾನಸಭೆ ಕ್ಷೇತ್ರಗಳ ಶಾಸಕರ ಸಭೆ ಕರೆಯಬೇಕು ಎಂದು ಶರವಣ ಆಗ್ರಹಿಸಿದ್ದಾರೆ

Articles You Might Like

Share This Article