ಬೆಂಗಳೂರು, ಫೆ.27- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಸರ್ಕಾರದ ನಿರ್ಗಮನದ ಸುಳಿವನ್ನು ಇಂದು ಮಂಡಿಸಿದ ಬಜೆಟ್ ನಲ್ಲಿ ನೀಡಿದ್ದಾರೆ ಎಂದು ವಿಧಾನ ಪರಿಷತ್ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಟಿ. ಎ.ಶರವಣ ಟೀಕಿಸಿದ್ದಾರೆ. ಉಳಿತಾಯ ಬಜೆಟ್ ಎಂದು ಹೇಳಿರುವ ಸರ್ಕಾರ ಕಳೆದ ಬಜೆಟ್ ನಲ್ಲಿ ಘೋಷಿಸಿದ ಯೋಜನೆಗಳಿಗೆ ಖರ್ಚು ಮಾಡಿರುವುದು ಸರಾಸರಿ ಶೇ. 56 ರಷ್ಟು ಮಾತ್ರ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರ ಕಳೆದ ಬಜೆಟ್ ನಲ್ಲಿ ಘೋಷಿಸಿದ್ದನ್ನೇ ಜಾರಿ ಮಾಡಿಲ್ಲ. ಮಕ್ಕಳಿಗೆ ಸಮವಸ್ತ್ರ, ಶೂ ಕೊಡಲು ಸಾಧ್ಯವಿಲ್ಲ. ಮನೆ ಮನೆಗೆ ಆರೋಗ್ಯ, ಔಷಧ ನೀಡುವ ಯೋಜನೆ ಜಾರಿ ಆಗಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆ ಆಗಿಲ್ಲ. ವರ್ತುಲ ರೈಲು ಹುಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂಗೈನಲ್ಲಿ ಅರಮನೆ ತೋರಿಸಿರುವ ಈ ಬಜೆಟ್ ಬರೀ ಭರವಸೆಯ ಬುಟ್ಟಿ ಹರಿಸಿದೆ. ಇದರಲ್ಲಿ ರೈತರ ನೆತ್ತಿಗೆ ತುಪ್ಪ ಸವರಲಾಗಿದೆ. ಗೃಹಿಣಿಯರಿಗೆ ಹುಸಿ ಭರವಸೆ ನೀಡಲಾಗಿದೆ ಎಂದು ಅವರು ಟೀಕಿಸಿದ್ದಾರೆ.
ಮೂರು ವರ್ಷಗಳಲ್ಲಿ ಮಾಡಲು ಸಾಧ್ಯವಾಗದ ಯೋಜನೆಗಳನ್ನು ಅಧಿಕಾರ ಅವಧಿ ಮುಗಿಯಲು ಕೇವಲ ಒಂದು ಎರಡು ತಿಂಗಳು ಬಾಕಿ ಇರುವಾಗ ಈ ಬಜೆಟ್ ನಲ್ಲಿ ಘೋಷಿಸಿರುವುದು ಆಶ್ಚರ್ಯಕರ ಎಂದಿದ್ದಾರೆ.
ನಿರ್ಗಮನ ಹಂತದ ಹುಸಿ ಭರವಸೆ ಅಲ್ಲದೆ ಇನ್ನೇನು ಅಲ್ಲ. ಬಸವರಾಜ ಬೊಮ್ಮಾಯಿ ಹಿರಿಯ ರಾಜಕಾರಣಿ ಆಗಿದ್ದು, ಚುನಾವಣೆ ಪ್ರಣಾಳಿಕೆ ಮತ್ತು ಬಜೆಟ್ ನಡುವಿನ ವ್ಯತ್ಯಾಸದ ಅರಿವು ಇರಬೇಕಾಗಿತ್ತು. ರಾಜ್ಯದಲ್ಲಿ ಈಗ ಸ್ವರ್ಗ ಸೃಷ್ಟಿ ಮಾಡುವಂತೆ ನೀಡಿರುವ ಭರವಸೆಗಳ ಮಹಪೂರ ಪ್ರಣಾಳಿಕೆ ಎನ್ನುವಂತಿದೆ ಎಂದು ಆರೋಪಿಸಿದ್ದಾರೆ.
ಘೋಷಿತ ಯೋಜನೆಗಳಿಗೆ ತಗುಲುವ ವೆಚ್ಚಕ್ಕೆ ಹಣವನ್ನು ಎಲ್ಲಿಂದ ಹೊಂದಿಸುತ್ತಾರೆ ಎನ್ನುವ ವಿವರ ನೀಡಿಲ್ಲ. ಈ ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿ ಮಾಡದೆ, ಚುನಾವಣೆ ಕಾಲದಲ್ಲಿ ಈಗೇಕೆ ಭರವಸೆಯ ಆಕಾಶ ಬುಟ್ಟಿ ಕಟ್ಟುತ್ತಿದ್ದಾರೆ ಎನ್ನುವುದು ಇಲ್ಲಿಯ ಮುಖ್ಯ ಪ್ರಶ್ನೆ ಆಗಿದೆ.
ರೈತರ ಬೆಳೆಗೆ ಬೆಲೆ ಇಲ್ಲದೆ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಬಗ್ಗೆ ಈ ಬಜೆಟ್ ನಲ್ಲಿ ದೂರದೃಷ್ಟಿ ಇಲ್ಲ.ನೀರಾವರಿಯಲ್ಲೂ ಸರ್ಕಾರದ ಕೊಡುಗೆ ಶೂನ್ಯ.ಮಹದಾಯಿ ಯೋಜನೆಗೆ ಒಂದು ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದು ಬಿಟ್ಟರೆ, ಮೇಕೆದಾಟು ಬಗ್ಗೆ ಏನೇನೂ ಇಲ್ಲ. ಕೃಷ್ಣ ಕಾಮಗಾರಿ ಬಗ್ಗೆ ವಿವರಗಳು ಇಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ಈ ಬಜೆಟ್ ರೂಪಿಸಿದ್ದು, ವೋಟ್ ಬ್ಯಾಂಕ್ ಲೆಕ್ಕಾಚಾರ ನಿಶ್ಚಿತವಾಗಿ ಎದ್ದು ಕಂಡಿದೆ. ಬೆಂಗಳೂರು ನಗರಕ್ಕೆ ಬರೀ ಹುಸಿ ಭರವಸೆಯ ಸುರಿಮಳೆ ಮಾಡಿದ್ದಾರೆ. ರಸ್ತೆ ಗುಂಡಿ ಹಾವಳಿ, ವರ್ತುಲ ರೈಲು, ಅಸ್ತಿತೆರಿಗೆ ಇಳಿಕೆ ವಿಚಾರ ಇದ್ಯಾವುದು ಈ ಬಜೆಟ್ ನಲ್ಲಿ ಇಲ್ಲ ಎಂದು ಹೇಳಿದರು. ಈ ಬಜೆಟ್ ಉಪ್ಪು ಹುಳಿ ಮತ್ತು ಕಾರ ಇಲ್ಲದೇ ಇರುವ ಬಜೆಟ್ ಆಗಿದೆ ಎಂದು ಟೀಕಿಸಿದರು.
#Sharavana, #Reation, #BommaiBudget,#BasavarajBommai #Budget2023, #StateBudget2023, #BommaiBudget, #ಬಜೆಟ್ #ಬಜೆಟ್2023,