ಕನ್ನಡಿಗರ ತಾಳ್ಮೆ ಕೆಣಕಿದ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಆಕ್ರೋಶ
ಬೆಳಗಾವಿ,ಜ.19-ಸಮಾಜ ಸೇವೆಯ ಹೆಸರೇಳಿಕೊಂಡು ಬಿಜೆಪಿ ಸೇರಿ ಆಕಸ್ಮಿಕವಾಗಿ ಮಂತ್ರಿ ಪದವಿ ಪಡೆದುಕೊಂಡಿರುವ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮತ್ತೊಮ್ಮೆ ಕನ್ನಡಿಗರ ತಾಳ್ಮೆ ಕೆಣಕುವ ಪ್ರಯತ್ನಕ್ಕೆ ಕೈ ಹಾಕಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದಶಕಗಳಿಂದ ಭಾಷಾ ಮತ್ತು ಭೂಪ್ರದೇಶ ವಿಚಾರದಲ್ಲಿ ಕರ್ನಾಟಕ- ಮಹಾರಾಷ್ಟ್ರ ನಡುವೆ ಗುz್ದÁಟ ನಡೆದಿದ್ದರೂ, ತನ್ನ ಸ್ವಾರ್ಥಕ್ಕಾಗಿ ತಮಾಷೆಯ ರಾಜಕಾರಣ ಮಾಡುತ್ತಿರುವ ಜೊಲ್ಲೆ ಅವರು ತಮ್ಮ ಮರಾಠಿ ಪ್ರೇಮ ಮುಂದುವರೆಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಕನ್ನಡ ಭಾಷೆ ಮತ್ತು ನೆಲದ ಬಗ್ಗೆ ನೀಡುತ್ತಿರುವ ಉದ್ಧಟತನದ ಹೇಳಿಕೆಗೆ ಇತ್ತ ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಗೃಹಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ-ಎಚ್. ಡಿ. ಕುಮಾರಸ್ವಾಮಿ ಉದ್ಧಟ ಉದ್ಧವ ವಿರುದ್ಧ ತಿರುಗಿ ಬಿದ್ದು ಟಾಂಗ್ ಕೊಟ್ಟಿದ್ದಾರೆ.
ಅಲ್ಲದೆ ಕರ್ನಾಟಕದ ಕನ್ನಡಪರ ಸಂಘಟನೆಗಳು ಬೀದಿ ಹೋರಾಟ ನಡೆಸಿವೆ. ಆದ್ರೆ ಕನ್ನಡಿಗಳೆಂದು ಹೇಳಿಕೊಳ್ಳುವ ರಾಜ್ಯ ಸರಕಾರದ ಸಚಿವೆ ಶಶಿಕಲಾ ಮಾತ್ರ ಗಡಿಭಾಗ ನಿಪ್ಪಾಣಿ ಕ್ಷೇತ್ರದಲ್ಲಿ ಅಧಿಕಾರದ ಹಮ್ಮುಬಿಮ್ಮಿನಿಂದ ಕುಳಿತು ಮರಾಠಿ ಬಳಕೆ ಮಾಡುತ್ತ ರಾಜ್ಯಕ್ಕೂ ನನಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಕರ್ನಾಟಕ ಸರಕಾರ ಮತ್ತು ಅದರ ಭೂಪ್ರದೇಶ ಆಸ್ಮಿತೆಗೆ ಕಳಂಕ ತಂದಿರುವ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕುರ್ಚಿ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ತಾಯಿ ಮಗು ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಿರಿಯ ಸಚಿವ ಡಾ. ಸುಧಾಕರ ಇರುವಾಗಲೇ ಈ ಸಚಿವೆ ಮರಾಠಿಯಲ್ಲಿ ಕಾರ್ಯಕ್ರಮ ರೂಪಿಸಿದ್ದರು, ವೇದಿಕೆ ಬರಹದಲ್ಲೂ ಬರೀ ಮರಾಠಿ ಭಾಷೆ ಎದ್ದುಕಾಣುತ್ತಿತ್ತು. ಮಾಧ್ಯಮಗಳ ಪ್ರಶ್ನೆಗೆ ಮತ್ತೂ ಉಡಾಫೆ ಉತ್ತರ ಕೊಟ್ಟಿರುವ ಶಶಿಕಲಾ ಜೊಲ್ಲೆ ಕನ್ನಡ ಮರಾಠಿಗರು ಅನ್ಯೋನ್ಯವಾಗಿದ್ದಾರೆ, ನಿಪ್ಪಾಣಿಯಲ್ಲಿ ಮರಾಠಿ ಜೊತೆಗೆ ಕನ್ನಡ ಬೆಳೆಯುತ್ತಿದೆ ಎಂದು ಹೇಳುವ ಧೈರ್ಯ ಮಾಡಿದ್ದಾರೆ. ರಾಜ್ಯ ಸರಕಾರದ ಕಾರ್ಯಕ್ರಮಗಳನ್ನು ತಮ್ಮ ಮರಾಠಿ ಮತಬ್ಯಾಂಕ್ ಓಲೈಕೆಗೆ ಮುಂದಾಗಿರುವುದು ಇದೀಗ ಅವರಿಗೆ ಮಗ್ಗುಲ ಮುಳ್ಳಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಇವರು ಮಾಡಿರುವ ಸಾಧನೆ ಏನೂ ಇಲ್ಲ, ರಾಜ್ಯಕ್ಕಿರಲಿ ಬೆಳಗಾವಿ ಜಿಲ್ಲೆಗೂ ಇವರಿಂದ ಉಪಯೋಗವಿಲ್ಲ. ರಾಜ್ಯಾದ್ಯಂತ ಓಡಾಡಿ ಇಲಾಖೆಯನ್ನು ಚುರುಕುಗೊಳಿಸುವ ಬದಲು ತನ್ನ ಸ್ವಕ್ಷೇತ್ರ ನಿಪ್ಪಾಣಿಯಲ್ಲಿ ಠಿಕಾಣಿ ಹೂಡಿ ಮರಾಠಿ ಜನರು ಮತ್ತು ಮಹಾರಾಷ್ಟ್ರ ಸರಕಾರವನ್ನು ಖುಷಿಪಡಿಸುತ್ತಿರುವುದೆ ಇವರ ಕಾಯಕವಾಗಿದೆ.
ಇಂತಹ ಮರಾಠಿ ಪ್ರೇಮಿ ಸಚಿವೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಗೆ ಅಧಿಕಾರದಲ್ಲಿ ಮುಂದುವರೆಸಿದ್ದಾರೆ ಎಂಬುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕನ್ನಡಪರ ಸಂಘಟನೆಗಳು ಈ ಸಚಿವೆಯ ವಿರುದ್ಧ ಕೆಂಡಕಾರಿದ್ದು ಇದು ಬಿಜೆಪಿ ಮತ್ತು ರಾಜ್ಯ ಸರಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ಮಹಾರಾಷ್ಟ್ರ ಗಡಿಭಾಗದಲ್ಲಿ ಚುಟುಕಾಗಿ ಓಡಾಡಿ ಕನ್ನಡ ಭಾಷೆ, ಸಾಹಿತ್ಯ- ಸಂಸ್ಕ್ರತಿ ಪ್ರಚುರಪಡಿಸಿ ರಾಜ್ಯದ ಅಭಿಮಾನ ಹೆಚ್ಚಿಸಬೇಕಿದ್ದ ಜೊಲ್ಲೆ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕನ್ನಡ ವಿರೋಧಿ ಚಟುವಟಿಕೆ ಮಾಡುತ್ತ ಕರ್ನಾಟಕಕ್ಕೇ ಕಂಟಕವಾಗಿದ್ದಾರೆ ಎಂದು ಗಡಿಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಇರುವುದು ಒಬ್ಬರೆ ಮಹಿಳಾ ಸಚಿವರು, ಇವರು ಎಲ್ಲಾ ಮಹಿಳೆಯರನ್ನು ಸಂಘಟಿಸಿ ಸರ್ಕಾರಕ್ಕೆ ಉತ್ತಮ ಹೆಸರು ತಂದುಕೊಡಬೇಕಿತ್ತು. ಆದರೆ, ಪ್ರತಿಭಾರಿ ಗಡಿಭಾಗದಲ್ಲಿ ಭಾಷಾ ವಿವಾದ ಕೆಣಕಿ ಮುಜುಗರ ತಂದು ಸರ್ಕಾರಕ್ಕೆ ಭಾರವಾಗುತ್ತಿದ್ದಾರೆ. ಇಂತಹವರನ್ನು ಸಚಿವ ಸ್ಥಾನದಲ್ಲಿ ಮುಂದುವರೆಸುವುದು ಯಾವ ನ್ಯಾಯ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.