ಮುಷ್ಕರ ನಿರತ ಬಿಎಂಟಿಸಿ ನೌಕರರ ವಿರುದ್ಧ ಶಿಸ್ತು ಕ್ರಮ: ಶಿಖಾ ಎಚ್ಚರಿಕೆ

ಬೆಂಗಳೂರು,ಡಿ.12- ಇಂದು ಸಂಜೆಯೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಪ್ರತಿಭಟನೆ ನಡೆಸುತ್ತಿರುವ ಬಿಎಂಟಿಸಿ ನೌಕರರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪ್ರತಿಭಟನೆ ನಡೆಸುವುದು ಸರಿಯಾದ ಮಾರ್ಗವಲ್ಲ. ಇಂದು ಸಂಜೆವರೆಗೂ ನಾವು ಕಾಯುತ್ತಿದ್ದೇವೆ. ತಕ್ಷಣವೇ ಪ್ರತಿಭಟನೆ ಕೈಬಿಡಬೇಕು. ಒಂದು ವೇಳೆ ಇದೇ ಹಠಮಾರಿ ಧೋರಣೆ ಅನುಸರಿಸಿದರೆ ನಾಳೆಯೊಳಗೆ ಶಿಸ್ತು ಕ್ರಮ ಜರುಗಿಸುವುದು ಖಚಿತ ಎಂದು ಹೇಳಿದರು.

ಕಳೆದ ಮೂರು ದಿನಗಳಿಂದ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿರುವ ಪರಿಣಾಮ ಸಾವಿರಾರು ಜನರಿಗೆ ತೊಂದರೆಯಾಗಿದೆ. ನಾವು ಬೇಡಿಕೆಯನ್ನು ಪರಿಗಣಿಸುವುದಾಗಿ ಹೇಳಿದ್ದೇವೆ. ಆದರೂ ಕರ್ತವ್ಯಕ್ಕೆ ಗೈರು ಹಾಜರಾಗಿ ಬಸ್ ಸಂಚಾರಕ್ಕೆ ಅವಕಾಶವನ್ನೂ ಕೊಡದೆ ಪ್ರತಿಭಟನೆ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಬೇಡಿಕೆಗಳು ಏನೇ ಇದ್ದರೂ ಸರ್ಕಾರ ಮಾತುಕತೆಗೆ ಸಿದ್ದವಿದೆ.

ನಾವು ನೌಕರರ ಪರವಾಗಿಯೇ ಇದ್ದೇವೆ. ಸರ್ಕಾರವೂ ಕೂಡ ಕಾಲಕ್ಕೆ ಕಾಲಕ್ಕೆ ಬೇಡಿಕೆಗಳನ್ನು ಈಡೇರಿಸಿದೆ ಎಂಬುದನ್ನು ಮರೆಯಬಾರದು. ಕೂಡಲೇ ಪ್ರತಿಭಟನೆಯನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಎಂದು ಶಿಖಾ ಮನವಿ ಮಾಡಿದರು. ಬೆಂಗಳೂರಿನಲ್ಲಿ ಲಕ್ಷಾಂತರ ಜನರು ಬಿಎಂಟಿಸಿ ಬಸ್‍ಗಳನ್ನೇ ಅವಲಂಬಿಸಿದ್ದಾರೆ. ಎಲ್ಲರಿಗೂ ಹೆಚ್ಚಿನ ಹಣ ಕೊಟ್ಟು ಆಟೋ, ಓಲಾ, ಊಬರ್‍ನಲ್ಲಿ ಸಂಚರಿಸಲು ಸಾಧ್ಯವಿಲ್ಲ. ನಿಮ್ಮ ಪ್ರತಿಭಟನೆಯಿಂದಾಗಿ ಬೇರೊಬ್ಬರಿಗೆ ತೊಂದರೆಯಾಗಬಾರದು. ಕರ್ತವ್ಯಕ್ಕೆ ಹಾಜರಾಗಿ ಎಂದು ಹೇಳಿದರು.

ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳೇ ಮಾತುಕತೆಗೆ ಬರಬೇಕು. ಪ್ರತಿಭಟನಾ ಸ್ಥಳದಲ್ಲೇ ಮಾತುಕತೆ ನಡೆಸಬೇಕೆಂದು ಹೇಳುವುದು ಸೂಕ್ತವಲ್ಲ. ಬೇಡಿಕೆಗಳನ್ನು ಈಡೇರಿಸಲು ಕಾನೂನು ಕ್ರಮಗಳಿರುತ್ತವೆ. ಏಕಾಏಕಿ ಈಡೇರಿಸಲೇಬೇಕೆಂದು ಪಟ್ಟು ಹಿಡಿಯುವುದು ಸರಿಯಲ್ಲ ಎಂದ ಶಿಖಾ ಆಕ್ಷೇಪಿಸಿದರು. ಈಗಲೂ ನಾನು ನೌಕರರಲ್ಲಿ ಮನವಿ ಮಾಡುವುದೇನೆಂದರೆ ಎಲ್ಲಾ ನೌಕರರು ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗ ಬೇಕು. ನಾವು ಶಿಸ್ತು ಕ್ರಮ ಜರುಗಿಸುವ ಮಟ್ಟಕ್ಕೆ ಪ್ರತಿಭಟನೆ ಮಾಡಬೇಡಿ. ಸಾರ್ವಜನಿಕರಿಗೆ ತೊಂದರೆ ಯಾಗುತ್ತಿರುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.