ಬಾಲಿವುಡ್‍ನಲ್ಲಿ `ಗಬ್ಬರ್ ಸಿಂಗ್’ ದರ್ಬಾರ್

Spread the love

ಮುಂಬೈ, ಮೇ 18- ಚಿತ್ರರಂಗಕ್ಕೂ ಕ್ರಿಕೆಟ್ ರಂಗಕ್ಕೂ ಬಿಡಿಸಲಾಗದ ಬಂಧವಿದೆ, ಎಷ್ಟೋ ನಟರು, ಕಲಾವಿದೆಯರನ್ನು ಮದುವೆ ಆಗಿದ್ದರೆ, ಕೆಲವು ಕ್ರೀಡಾಪಟುಗಳು ಚಿತ್ರರಂಗದಲ್ಲಿ ಮಿಂಚು ಹರಿಸಿದ್ದಾರೆ, ಈಗ ಭಾರತ ತಂಡದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್‍ರ ಸರದಿ.

ಶಿಖರ್ ಧವನ್ ಅವರು ಡ್ರೀಮ್ 11 ಸೇರಿದಂತೆ ಎಷ್ಟೋ ಜಾಹೀರಾತುಗಳಲ್ಲಿ ತಮ್ಮ ನಟನಾ ಹಾಗೂ ನೃತ್ಯದ ಕೌಶಲ್ಯ ಮೆರೆದಿದ್ದು ಅಭಿಮಾನಿಗಳ ಮನ ಗೆದ್ದಿದ್ದಾರೆ. ಈಗ ನೇರವಾಗಿಯೇ ಬಾಲಿವುಡ್‍ನ ಚಿತ್ರವೊಂದರಲ್ಲಿ ನಟಿಸುವ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ಶಿಖರ್ ಧವನ್ ಅವರು ಇತ್ತೀಚೆಗೆ ಅಕ್ಷಯ್‍ಕುಮಾರ್ ನಟನೆಯ ರಾಮ್‍ಸೇತು ಚಿತ್ರೀಕರಣದ ವೇಳೆ ಅಕ್ಕಿಯೊಂದಿಗೆ ಕಾಣಿಸಿಕೊಂಡಿದ್ದರು, ಶಿಖರ್ ಧವನ್ ಅವರು ಈ ಚಿತ್ರದಲ್ಲೇ ನಟಿಸುತ್ತಿದ್ದಾರೋ ಎಂದು ಅಂದಾಜಿಸಲಾಗುತ್ತಿದೆಯಾದರೂ ಗಬ್ಬರ್ ನಟಿಸುತ್ತಿರುವುದು ಬೇರೊಂದು ಚಿತ್ರದಲ್ಲಿ ಅಂತೆ.

ಈ ಚಿತ್ರವನ್ನು ಬಾಲಿ ವುಡ್‍ನ ಖ್ಯಾತ ನಿರ್ದೇಶಕರೊಬ್ಬರು ನಿರ್ದೇಶಿಸುತ್ತಿದ್ದು ಸಿನಿಮಾದ ಟೈಟಲ್ ಅನ್ನು ಸದ್ಯದಲ್ಲೇ ತಿಳಿಸಲಿದ್ದಾರಂತೆ. ಅಂದಹಾಗೆ ಈ ಚಿತ್ರದಲ್ಲಿ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಯಾವುದೋ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಬದಲಾಗಿ ಪೂರ್ಣ ಪ್ರಮಾಣದ ಪಾತ್ರವನ್ನೇ ನಿರ್ವಹಿಸುತ್ತಿದ್ದಾರಂತೆ.

ಈ ಹಿಂದೆಯೂ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಧೋನಿ, ಮಿಥಾಲಿರಾಜ್ ಸೇರಿದಂತೆ ಹಲವು ಖ್ಯಾತ ಕ್ರಿಕೆಟಿಗರ ಚಿತ್ರವು ಬಾಲಿವುಡ್‍ನಲ್ಲಿ ನಿರ್ಮಾಣವಾಗಿದ್ದರೆ, ಕಪಿಲ್‍ದೇವ್, ಸುನೀಲ್‍ಗವಾಸ್ಕರ್, ವಿನೋದ್ ಕಾಂಬ್ಳೆ, ಅನಿಲ್ ಕುಂಬ್ಳೆ, ಸುನೀಲ್‍ಜೋಷಿ ಮುಂತಾದವರು ಅತಿಥಿ ಪಾತ್ರದಲ್ಲಿ ನಟಿಸಿದ್ದರೆ, ಮಾಜಿ ಕ್ರಿಕೆಟಿಗ ಅಜಯ್‍ಜಾಡೇಜಾ ಬಾಲಿವುಡ್‍ನ `ಖೇಲ್’ ಹಾಗೂ ಶ್ರೀಶಾಂತ್ ಕನ್ನಡದ ಕೆಂಪೇಗೌಡ 3 ಚಿತ್ರದಲ್ಲಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಈಗ ಶಿಖರ್‍ಧವನ್‍ರ ಸರದಿಯಾಗಿದ್ದು, ಈ ರಂಗದಲ್ಲೂ ಅವರು ದೊಡ್ಡ ಪ್ರಮಾಣದ ಹೆಸರು ಮಾಡುವಂತಾಗಲಿ.

Facebook Comments