ಶಿವಮೊಗ್ಗ, ಆ.16- ಯುವಕನಿಗೆ ಚಾಕು ಇರಿದು ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಇಂದು ಮುಂಜಾನೆ ಪೊಲೀಸರ ಕಾರ್ಯಾಚರಣೆ ವೇಳೆ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ. ನಗರದ ಜೆ.ಸಿ. ನಗರ ನಿವಾಸಿ ಮೊಹಮ್ಮದ್ ಜಬಿ ಅಲಿಯಾಸ್ ಚರ್ಬಿ(30) ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ. ಈತನನ್ನು ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ರಾತ್ರಿ ನದೀಮ್ ಹಾಗೂ ಅಬ್ದುಲ್ ರೆಹೆಮಾನ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿ ಮಾಹಿತಿಯನ್ನು ಪಡೆದುಕೊಂಡು ಪ್ರಮುಖ ಆರೋಪಿ ಮೊಹಮ್ಮದ್ ಜಬಿಗಾಗಿ ವಿನೋಬ ನಗರ ಠಾಣಾ ಪೊಲೀಸರು ಶೋಧ ನಡೆಸುತ್ತಿದ್ದರು.
ಇಂದು ಮುಂಜಾನೆ 4 ಗಂಟೆ ಸುಮಾರಿನಲ್ಲಿ ತೀರ್ಥಹಳ್ಳಿ ರಸ್ತೆಯ ಫಲಕ್ ಸಮುದಾಯ ಭವನದ ಬಳಿ ಆರೋಪಿ ಮೊಹಮ್ಮದ್ ಜಬಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಬಿಸಿದೆ. ತಕ್ಷಣ ವಿನೋಬ ನಗರ ಠಾಣೆ ಪಿಎಸ್‍ಐ ಮಂಜುನಾಥ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳುತ್ತಿದ್ದಂತೆ ಪೊಲೀಸರನ್ನು ಕಂಡ ಆರೋಪಿ ಮೊಹಮ್ಮದ್ ಚಾಕುವಿನಿಂದ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ತಕ್ಷಣ ಪಿಎಸ್‍ಐ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಆದರೆ ಪೊಲೀಸರ ಮಾತಿಗೆ ಕಿವಿಗೊಡದೆ ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮ ರಕ್ಷಣೆಗಾಗಿ ಮಂಜುನಾಥ್ ಅವರು ಹಾರಿಸಿದ ಗುಂಡು ಆರೋಪಿಯ ಬಲಗಾಲಿಗೆ ತಗುಲಿ ಆತ ಕುಸಿದು ಬಿದ್ದಿದ್ದಾನೆ.
ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ನಗರದ ಮೆಗಾನ್ ಆಸ್ಪತ್ರೆಗೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಕ್ಷುಬ್ಧ ವಾತಾವರಣ: ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ: ಮಲೆನಾಡಿನ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವುದರಿಂದ ಜಿಲ್ಲಾಡಳಿತ ನಗರ ಹಾಗೂ ಭದ್ರಾವತಿ ವ್ಯಾಪ್ತಿಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದೆ.
ಘಟನೆ ಹಿನ್ನೆಲೆ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಗರದ ಹೃದಯ ಭಾಗವಾದ ಅಮೀರ್ ಅಹಮ್ಮದ್ ಸರ್ಕಲ್‍ನಲ್ಲಿ ಅಳವಡಿಸಿದ್ದ ಸಾವರ್ಕರ್ ಭಾವಚಿತ್ರವನ್ನು ನಿನ್ನೆ ಮಧ್ಯಾಹ್ನ ಏಕಾಏಕಿ ಗುಂಪೊಂದು ತೆರವುಗೊಳಿಸುತ್ತಿದ್ದಂತೆ ಅದು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪೊಲೀಸರು ಗುಂಪನ್ನು ಚದುರಿಸಲು ಹರಸಾಹಸ ಪಟ್ಟರು. ಆ ಸಂದರ್ಭದಲ್ಲಿ ಪರ ವಿರೋಧದ ಘೋಷಣೆ ಕೂಗಿದಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಬೇಕಾಯಿತು. ಗಲಾಟೆ ಹೆಚ್ಚಾಗುತ್ತಿದ್ದಂತೆ ಅಂಗಡಿ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ಹೋಗುತ್ತಿದ್ದ ಪ್ರೇಮ್‍ಸಿಂಗ್ ಎಂಬಾತನಿಗೆ ಬೈಕ್‍ನಲ್ಲಿ ಬಂದ ನಾಲ್ವರು ಏಕಾಏಕಿ ಆತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಗಾಯಗೊಂಡ ಪ್ರೇಮ್‍ಸಿಂಗ್‍ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆ ನಗರದಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು. ರಾತ್ರಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸ್ಥಳದಲ್ಲಿ ಎಂಟು ಕೆಎಸ್‍ಆರ್‍ಪಿ ತುಕಡಿಗಳು, ಆರ್‍ಎಎಫ್ ಒಂದು ತುಕಡಿ, ಡಿಎಆರ್ ಹತ್ತು ತುಕಡಿ ಹಾಗೂ ಚಿತ್ರದುರ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರಿನಿಂದ ಹೆಚ್ಚುವರಿಯಾಗಿ ಸಿವಿಲ್ ಪೊಲೀಸರನ್ನು ಕರೆಸಿಕೊಂಡು ಸ್ಥಳದಲ್ಲಿ ಬಂದೋಬಸ್ತ್‍ಗಳಿಗಾಗಿ ನಿಯೋಜಿಸಲಾಗಿದೆ.
ಮುಂಜಾಗ್ರತೆಯಾಗಿ ಆಗಸ್ಟ್ 18 ರಾತ್ರಿ 10 ಗಂಟೆವರೆಗೂ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.