ಆರ್‌ಆರ್‌ನಿಂದ ಹಿಟ್ಮೇಯರ್ ಹೊರಕ್ಕೆ ಕಾರಣವೇನು ಗೊತ್ತಾ..?

Spread the love

ಮುಂಬೈ,ಮೇ 8- ಪಂಜಾಬ್ ಕಿಂಗ್ಸ್ ವಿರುದ್ಧ ತನ್ನ ಬ್ಯಾಟಿಂಗ್ ಶಕ್ತಿ ( 16 ಎಸೆತ, 31 ರನ್)ಯಿಂದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಸ್ಟಾರ್ ಆಟಗಾರ ಶಿಮ್ರಾನ್ ಹಿಟ್ಮೇಯರ್ ಉಳಿದ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ತಮ್ಮ ಮುಂದಿನ ಪಂದ್ಯವನ್ನು ಆಡಲು ರಾಜಸ್ಥಾನ್ ರಾಯಲ್ಸ್ ಮುಂಬೈನಲ್ಲಿ ಶಿಬಿರ ಹೂಡಿದ್ದು ಇಂದು ಬೆಳಗ್ಗೆ ಆ ಶಿಬಿರದಿಂದ ಹಿಟ್ಮೇಯರ್ ಅವರು ತಮ್ಮ ತವರು ನೆಲವಾದ ಗಯಾನಕ್ಕೆ ತೆರಳಿದ್ದಾರೆ.

ಹಿಟ್ಮೇಯರ್ ತವರಿಗೆ ತೆರಳುವ ಮುನ್ನ ತಂಡದ ಮುಂಚೂಣಿ ಆಟಗಾರ ಯಜುವೇಂದ್ರ ಚಹಾಲ್ ಸೇರಿದಂತೆ ಹಲವರನ್ನು ಅಲಂಗಿಸಿಕೊಂಡು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಸಿಮ್ರಾನ್ ಹಿಟ್ಮೇಯರ್ ಅವರ ಪತ್ನಿ ನಿರ್ವಾನಿ ಅವರು ಮಗುವಿಗೆ ಜನ್ಮ ನೀಡುತ್ತಿರು ವುದರಿಂದ ಅವರು ರಾಜಸ್ಥಾನ್ ರಾಯಲ್ಸ್ ನ ಕ್ಯಾಂಪ್ ಅನ್ನು ತೊರೆದಿದ್ದಾರೆ, ಆದರೆ ಅವರೂ ಆದಷ್ಟು ಬೇಗ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿಗಳು ತಮ್ಮ ವೆಬ್‍ಸೈಟ್‍ನಲ್ಲಿ ತಿಳಿಸಿದ್ದಾರೆ.

ಪ್ರತಿಯೊಬ್ಬರ ಜೀವನದಲ್ಲಿ ಮಗು ಹುಟ್ಟುವ ಕ್ಷಣ ತುಂಬಾ ಆನಂದದಾಯಕವಾಗಿದೆ, ಆ ಕ್ಷಣವನ್ನು ಅನುಭವಿಸಲೆಂದೇ ನಾನು ಗಯಾನಗೆ ತೆರಳುತ್ತಿದ್ದೇನೆ, ಆದರೆ ನನ್ನ ಮನಸ್ಸು ಇಲ್ಲೇ ಇರುವುದರಿಂದ ಮತ್ತು ನಾನು ಹಿಂದಿರುಗುವುದರಿಂದ ನನ್ನ ಕೆಲವು ವಸ್ತುಗಳನ್ನು ಇಲ್ಲೇ ಬಿಟ್ಟು ಹೋಗುತ್ತಿದ್ದೇನೆ ಎಂದು ಹಿಟ್ಮೇಯರ್ ತಿಳಿಸಿದ್ದಾರೆ.

2022ರ ಐಪಿಎಲ್‍ನಲ್ಲಿ ಆರ್‌ಆರ್‌ ತಂಡದ ಫಿನಿಷರ್ ಆಟಗಾರರಾಗಿರುವ ಶಿಮ್ರಾನ್ ಹಿಟ್ಮೇಯರ್ ತಾನಾಡಿರುವ 11 ಪಂದ್ಯಗಳಲ್ಲಿ 72.75ರ ಸರಾಸರಿಯಲ್ಲಿ 291 ರನ್ ಗಳಿಸಿದ್ದಾರೆ.

Facebook Comments