ಮುಂಬೈ, ಜು.30- ಶಿವಸೇನೆ ವಿರುದ್ಧ ಬಂಡಾಯ ಸಾರಿ, ಮಹಾ ವಿಕಾಸ ಅಘಾಡಿ ಸರ್ಕಾರವನ್ನು ಪತನಗೊಳಿಸಿ, ಬಿಜೆಪಿ ಜೊತೆ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದ ಏಕನಾಥ್ ಶಿಂಧೆ ಒಂದು ತಿಂಗಳಾದರು ಸಂಪುಟ ವಿಸ್ತರಣೆ ಮಾಡಲಾಗದೆ ಪರದಾಡುತ್ತಿದ್ದಾರೆ.
ಹೈವೋಲ್ಟೇಜ್ ರಾಜಕೀಯ ಡಾಮ್ರಾದಲ್ಲಿ ಯಶಸ್ಸು ಪಡೆದ ಏಕನಾಥ್ ಶಿಂಧೆ ಜು.30ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಉಪಮುಖ್ಯಮಂತ್ರಿಯಾಗಿ ಬಿಜೆಪಿ ದೇವೇಂದ್ರ ಪಡ್ನಾವೀಸ್ ಕೆಲಸ ಮಾಡುತ್ತಿದ್ದಾರೆ. ಇಬ್ಬರನ್ನೊಳಗೊಂಡ ಸಂಪುಟ ಒಂದು ತಿಂಗಳಿನಿಂದಲೂ ಆಡಳಿತ ನಡೆಸುತ್ತಿದೆ.
ರಾಜ್ಯಸಭೆ ಮತ್ತು ವಿಧಾನಪರಿಷತ್‍ಗೆ ನಡೆದ ಚುನಾವಣೆಗಳಿಂದ ಚಾಲನೆಗೊಂಡ ರಾಜಕೀಯ ಚಟುವಟಿಕೆಗಳು ಸುಮಾರು 10 ದಿನಗಳ ಕಾಲ ತೀವ್ರ ಕುತೂಹಲ ಕೆರಳಿಸಿದವು. 40 ಮಂದಿ ಶಿವಸೇನೆಯ ಶಾಸಕರು, ಪಕ್ಷೇತರರು 10 ಮಂದಿ ಸೇರಿ ಒಟ್ಟು 50 ಶಾಸಕರು ಮಹಾವಿಕಾಸ ಅಘಾಡಿ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದರು. ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಬಳಿಕ ನಡೆದ ವಿಶ್ವಾಸಮತ ಯಾಚನೆಯಲ್ಲೂ ಶಿಂಧೆ ಬಣ ಮತ್ತು ಬಿಜೆಪಿ ಗೆಲುವು ಸಾಸಿತ್ತು. ಸರ್ಕಾರ ರಚನೆಯಾಗಿ ಇಂದಿಗೆ ಒಂದು ತಿಂಗಳು ಕಳೆದಿದೆ. ಆದರೂ ಈವರೆಗೂ ಸಂಪುಟ ವಿಸ್ತರಣೆಯ ಲಕ್ಷಣಗಳು ಕಂಡು ಬರುತ್ತಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಶಿಂಧೆ ಬಣದ 16 ಮಂದಿ ಶಾಸಕರ ವಿರುದ್ಧ ಶಿವಸೇನೆ ನೀಡಿರುವ ದೂರು ಮತ್ತು ಅರ್ಜಿಗಳು ಸುಪ್ರಿಂಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ತಮ್ಮದೆ ನಿಜವಾದ ಶಿವಸೇನೆ ಎಂದು ಶಿಂಧೆ ಪ್ರತಿಪಾದಿರುವ ಅರ್ಜಿಯೂ ಪರಿಶೀಲನೆಗೆ ಒಳಪಡುತ್ತಿದೆ.
ಬಂಡಾಯ ಚಟುವಟಿಕೆಗಳು ಆರಂಭವಾಗಿ, ಸರ್ಕಾರ ಅಲ್ಪಮತಕ್ಕೆ ಕುಸಿದ ಬಳಿಕ ಉದ್ಧವ್ ಠಾಕ್ರೆ ಸರ್ಕಾರ ತೆಗೆದುಕೊಂಡ ಹಲವು ನಿರ್ಣಯಗಳನ್ನು ಶಿಂಧೆ ಮತ್ತು ಫಡ್ನಾವೀಸ್ ಅವರ ಕಿರಿ ಸಂಪುಟ ಹಿಂದೆ ಬದಲಾವಣೆ ಮಾಡಿದೆ.ಆದರೂ ಸಂಪುಟ ವಿಸ್ತರಣೆಗೆ ಹಿಂದೇಟು ಹಾಕುತ್ತಿರುವುದೇಕೆ ಎಂಬ ಪ್ರಶ್ನೆಗೆ ಹಲವು ಚರ್ಚೆಗಳು ನಡೆಯುತ್ತಿವೆ.
ಬಿಜೆಪಿ ಮತ್ತು ಶಿಂಧೆ ಬಣದ ನಡುವೆ ಅಧಿಕಾರ ಹಂಚಿಕೆ ಸೂತ್ರ ಸ್ಪಷ್ಟವಾಗಿಲ್ಲ. ರಾಜಕೀಯ ಪರಿಸ್ಥಿತಿ ಬದಲಾದರೆ ಶಿಂಧೆ ಬಣ ಬಿಜೆಪಿ ಜೊತೆ ವಿಲೀನವಾಗುವ ಕುರಿತು ಪರಿಶೀಲನೆ ನಡೆಯುತ್ತಿದೆ. ಹೀಗಾಗಿ ಸಂಪುಟ ವಿಸ್ತರಣಗೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.