ಟೋಕಿಯೋ,ಸೆ.27- ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರಮೋದಿ ಇತ್ತೀಚೆಗೆ ಹತ್ಯೆಯಾದ ಜಪಾನ್‍ನ ಮಾಜಿ ಪ್ರಧಾನಿ ಸಿಂಜೋ ಅಬೆ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು. ಜಾಗತಿಕವಾಗಿ ಸುಮಾರು 100ಕ್ಕೂ ಹೆಚ್ಚು ದೇಶಗಳ ಪ್ರಧಾನಿಗಳು ಅದರಲ್ಲೂ 20ಕ್ಕೂ ಹೆಚ್ಚು ಪ್ರಧಾನಿ ಹಾಗೂ ಅಧ್ಯಕ್ಷರಂತಹ ಮುಖ್ಯಸ್ಥರನ್ನೊಳಗೊಂಡಂತೆ ಹಲವರು ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.
ಇಂದು ಬೆಳಗ್ಗೆ ಜಪಾನ್‍ಗೆ ಆಗಮಿಸಿದ ಮೋದಿಯವರು ಹಲವು ಗಣ್ಯರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರದ್ದಾಂಜಲಿ ಸಲ್ಲಿಸಿದರು. ಭಾರತದೊಂದಿಗಿನ ದೃಢವಾದ ಸಂಬಂಧಕ್ಕೆ ಅಬೆ ದಿಟ್ಟ ದೃಷ್ಟಿಕೋನಗಳನ್ನು ಹೊಂದಿದ್ದರು. ಜಪಾನ್ ವಿದೇಶಾಂಗ ನೀತಿಗೆ ನವೀಕೃತ ರೂಪ ನೀಡಿದ್ದರು ಎಂದು ಕೊಂಡಾಡಿದ್ದಾರೆ.
ಸುಮಾರು 700ಕ್ಕೂ ಹೆಚ್ಚು ವಿದೇಶಿ ಗಣ್ಯರು ಭಾಗವಹಿಸಿದ್ದಾರೆ. ಟೋಕಿಯೋದ ನಿಪೋನ್ ಬುಡ್ಕೋನ್‍ನಲ್ಲಿ ಆಯೋಜಿಸಲಾಗಿದ್ದ ಸರ್ಕಾರದ ಕಾರ್ಯಕ್ರಮದಲ್ಲಿ ಅಮೇರಿಕದ ಉಪಾಧ್ಯಕ್ಷೆ ಕಮಲ ಹ್ಯಾರೀಸ್, ಒಲಿಂಪಿಕ್ ಅಂತಾರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷ ಥಾಮಸ್ ಭಾಜ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
ಕಾರ್ಯಕ್ರಮದ ಸ್ಥಳದಲ್ಲಿ ಜನಸ್ತೋಮ ಸೇರಿದ್ದು, ಅಬೆ ಅವರಿಗೆ ಪುಷ್ಪನಮನ ಸಲ್ಲಿಸಿದೆ. ಶ್ರದ್ದಾಂಜಲಿಯ ಬಳಿಕ ಪ್ರಧಾನಿಯವರು ವಿವಿಧ ದೇಶಗಳ ಗಣ್ಯರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಕಳೆದ ಜು.8ರಂದು ನಾರಾ ನಗರದಲ್ಲಿ ದುಷ್ಕರ್ಮಿಯೊಬ್ಬ ಅಬೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ.