ಇಸ್ಲಾಮಾಬಾದ್,ಜ.12- ಕಳೆದ ತಿಂಗಳು ಲಂಡನ್ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಯುರೇನಿಯಂ ಮಿಶ್ರಿತ ಸರಕುಗಳು ಕರಾಚಿಯಿಂದ ರವಾನೆಯಾಗಿವೆ ಎಂಬ ಬ್ರಿಟಿಷ್ ಮಾಧ್ಯಮಗಳ ವರದಿಗಳನ್ನು ಪಾಕಿಸ್ತಾನ ತಳ್ಳಿ ಹಾಕಿದೆ.
ಕಳೆದ ತಿಂಗಳು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಯುರೇನಿಯಂನಿಂದ ಕಲುಷಿತಗೊಂಡ ಸರಕುಗಳನ್ನು ಗಡಿ ಅಧಿಕಾರಿಗಳು ವಶಪಡಿಸಿಕೊಂಡರು. ನಂತರ ಬ್ರಿಟಿಷ್ ಭಯೋತ್ಪಾದನಾ ನಿಗ್ರಹ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು.
ಬ್ರಿಟಿಷ್ ಮೂಲದ ಸನ್ ಪತ್ರಿಕೆ ಈ ಕುರಿತು ವರದಿ ಮಾಡಿದ್ದು,ಯುರೇನಿಯಂ ಪಾಕಿಸ್ತಾನದಿಂದ ಬಂದಿದೆ ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ಉನ್ನತ ಅಧಿಕಾರಿಯೊಬ್ಬರು, ವರದಿಯಲ್ಲಿ ವಾಸ್ತವಾಂಶಗಳಿಲ್ಲ. ಈ ರೀತಿಯ ಮಾಹಿತಿಯನ್ನು ಇಂಗ್ಲೆಂಡ್ ಪಾಕಿಸ್ತಾನದೊಂದಿಗೆ ಅಧಿಕೃತವಾಗಿ ಹಂಚಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ
ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಸ್ಥಳೀಯ ಡಾನ್ ಪತ್ರಿಕೆಗೆ ಮಾಹಿತಿ ನೀಡಿದ್ದು, ಯುರೇನಿಯಂ ಮಿಶ್ರಿತ ಸರುಕು ಪಾಕಿಸ್ತಾನದಿಂದ ರವಾನೆಯಾಗಿಲ್ಲ. ಕೆಲ ಬ್ರಿಟಿಷ್ ಮಾಧ್ಯಮಗಳು ಇದನ್ನು ಸ್ಪಷ್ಟಪಡಿಸಿವೆ ಎಂದಿದ್ದಾರೆ.
ಒಮಾನ್ ನಾಗರೀಕ ವಿಮಾನ ಡಬ್ಲ್ಯುವೈ 101 ಡಿಸೆಂಬರ್ 29 ರ ಸಂಜೆ ಹೀಥ್ರೂ ಏರ್ಪೋರ್ಟ್ ಟರ್ಮಿನಲ್ 4ಕ್ಕೆ ತಲುಪಿದೆ. ಅದರಲ್ಲಿನ ಸರಕು ಆಪಾಯಕಾರಿ ಯುರೇನಿಯಂ ಹೊಂದಿರುವುದು ಖಚಿತವಾಗಿದೆ.
ವಿಮಾನ ಪಾಕಿಸ್ತಾನದ ಮೂಲದ್ದಾಗಿದೆ, ಅಲ್ಲಿನ ಅಧಿಕಾರಿಗಳು ಪರಿಶೀಲನೆ ನಡೆಸಿ ಮಸ್ಕಟ್ನಲ್ಲಿಯೇ ಸರಕನ್ನು ತಡೆ ಹಿಡಿಯ ಬಹುದಿತ್ತು. ಆದರೂ ಅದು ಇಂಗ್ಲೆಂಡ್ ತಲುಪಿದೆ. ಬ್ರಿಟಿಷ್ ವಿಮಾನ ನಿಲ್ದಾಣದ ಸ್ಕ್ಯಾನರ್ಗಳಲ್ಲಿ ಸಾಮಾನ್ಯ ಶೋಧನೆ ವೇಳೆ ಆಕ್ಷೇಪಾರ್ಹ ಪ್ಯಾಕೇಜ್ ಪತ್ತೆಯಾಗಿದೆ.
ಗಡಿ ಭದ್ರತಾ ಪಡೆಗಳ ಅಧಿಕಾರಿಗಳು ಎಚ್ಚರಿಕೆ ವಹಿಸಿ ವಿಶ್ಲೇಷಣೆ ನಡೆಸಿದಾಗ. ಸ್ಕ್ರಾಪ್ ಮೆಟಲ್ ಬಾರ್ಗಳೊಂದಿಗೆ ಯುರೇನಿಯಂ ಅನ್ನು ಮಿಶ್ರಣಗೊಳಿಸಲಾಗಿತ್ತು ಎಂದು ಹೇಳಲಾಗಿದೆ.
ಈ ಪ್ಯಾಕೇಜ್ ಅನ್ನು ಇಂಗ್ಲೆಂಡ್ ಮೂಲದ ಇರಾನ್ ಪ್ರಜೆಗಳಿಗೆ ರವಾನಿಸಲಾಗುತ್ತಿತ್ತು ಎಂದು ಸನ್ ಪತ್ರಿಕೆ ವರದಿ ಮಾಡಿದೆ. ಇತರ ಮಾಧ್ಯಮಗಳು ಇದನ್ನು ಇರಾನಿಯನ್ನರ ಒಡೆತನದ ಲಂಡನ್ ಮೂಲದ ವ್ಯಾಪಾರಕ್ಕೆ ರವಾನಿಸಲಾಗಿದೆ ಎಂದು ಹೇಳಿವೆ.
ಲಂಡನ್ ಅಸೆಂಬ್ಲಿ ಪೊಲೀಸ್ ಮತ್ತು ಅಪರಾಧ ಸಮಿತಿಯಲ್ಲಿ ಮಾತನಾಡಿದ ಮೆಟ್ ಪೊಲೀಸ್ ಭಯೋತ್ಪಾದನಾ ನಿಗ್ರಹ ಕಮಾಂಡರ್ ರಿಚರ್ಡ್ ಸ್ಮಿತ್, ಯರೇನಿಯಂ ಸಾಗಾಣಿಕೆಯ ಉದ್ದೇಶಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಇದು ಸೋರಿಕೆಯಾಗಿಲ್ಲ. ಸಾರ್ವಜನಿಕರ ಆರೋಗ್ಯಕ್ಕೆ ಅಪಾಯವಾಗಿಲ್ಲ. ಪತ್ತೆ ಹಚ್ಚಿರುವ ಪ್ಯಾಕೇಜ್ನಲ್ಲಿ ಯುರೇನಿಯಂ ಪ್ರಮಾಣ ಕಡಿಮೆ ಇದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ, ಬ್ರಿಟಿಷ್ ಸೇನೆಯ ರಾಸಾಯನಿಕ ಶಸ್ತ್ರಾಸ್ತ್ರಗಳ ಘಟಕದ ಮಾಜಿ ಮುಖ್ಯಸ್ಥ ಹ್ಯಾಮಿಶ್ ಡಿ ಬ್ರೆಟ್ಟನ್-ಗೋರ್ಡನ್, ಅಪಾಯಕಾರಿ ವಸ್ತು ಪಾಕಿಸ್ತಾನದಿಂದ ರವಾನೆಯಾಗಿರುವುದು ಕಳವಳಕಾರಿ. ಅದರಲ್ಲೂ ಜನ ಸಂಚಾರದ ವಾಣಿಜ್ಯ ವಿಮಾನದಲ್ಲಿ ಸಾಗಾಟ ಮಾಡಿರುವುದು ಇನ್ನೂ ಅಪಾಯಕಾರಿ ಎಂದಿದ್ದಾರೆ.
ಬಂಡೆಗಳಲ್ಲಿ ಕಂಡುಬರುವ ವಿಕಿರಣಶೀಲ ಲೋಹವಾದ ಯುರೇನಿಯಂ ಅನ್ನು ಪರಮಾಣು ಸ್ಥಾವರಗಳಿಗೆ ಇಂಧನವಾಗಿ ಮತ್ತು ನೌಕಾ ಹಡಗುಗಳು ಹಾಗೂ ಜಲಾಂತರ್ಗಾಮಿಗಳ ರಿಯಾಕ್ಟರ್ಗಳಿಗೆ ಬಳಸಲಾಗುತ್ತದೆ. ಪರಮಾಣು ಶಸ್ತ್ರಾಸ್ತ್ರಗಳಲ್ಲಿಯೂ ಬಳಸಲಾಗುತ್ತದೆ.
shipment, #uranium, #seized, #Heathrow, #airport, #Pakistan,