ಶಿರಾ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿ ತಂತ್ರ, ಜೆಡಿಎಸ್-ಕಾಂಗ್ರೆಸ್ ಪ್ರತಿತಂತ್ರ

# ಸಿ.ಎಸ್.ಕುಮಾರ್, ಚೇಳೂರು
ತುಮಕೂರು, ಸೆ.1-ಜೆಡಿಎಸ್ ಶಾಸಕ ಸತ್ಯನಾರಾಯಣ್ ಅವರ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜೆಡಿಎಸ್ ತೆಕ್ಕೆಯಲ್ಲಿರುವ ಶಿರಾದಲ್ಲಿ ಕೇಸರಿ ಬಾವುಟ ಹಾರಿಸಲು ಬಿಜೆಪಿ ಕಸರತ್ತು ಆರಂಭಿಸಿದೆ. ಸತ್ಯನಾರಾಯಣ್ ಅವರ ಹೆಸರನ್ನೇ ಬಳಸಿಕೊಂಡು ಮತ್ತೆ ಕ್ಷೇತ್ರ ಉಳಿಸಿಕೊಳ್ಳುವ ಸಮರ್ಥ ದಂಡನಾಯಕನಿಗೆ ಜೆಡಿಎಸ್ ಹುಡುಕಾಟ ನಡೆಸಿದೆ.

ಪಕ್ಷದ ಅನುಯಾಯಿಗಳು ಮತ್ತು ಮತದಾರರ ಮನಸ್ಸಿನಲ್ಲಿ ಕಣ್ಣೀರಿನ ಲೆಕ್ಕಾಚಾರವನ್ನ ಮುಂದಿಟ್ಟುಕೊಂಡು ಕುಟುಂಬದ ಸದಸ್ಯ ಸತ್ಯಪ್ರಕಾಶ್ ಅವರನ್ನೇ ಕಣಕ್ಕಿಳಿಸಿ ಕ್ಷೇತ್ರ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ ದೊಡ್ಡಗೌಡರು. ಕಳೆದ 2018 ರ ಚುನಾವಣೆಯಲ್ಲೇ ಸತ್ಯನಾರಾಯಣ್ ಅವರಿಗೆ ಟಿಕೆಟ್ ತಪ್ಪಿಸಿ ಜೆಡಿಎಸ್ ಹುರಿಯಾಳಾಗುವ ಲೆಕ್ಕಾಚಾರದಲ್ಲಿದ್ದ ಸಿ.ಆರ್.ಉಮೇಶ್, ಕಲ್ಕೆರೆ ರವಿಕುಮಾರ್, ಚಿದಾನಂದ್ ಸೇರಿದಂತೆ ಹಲವರು ಪ್ರಯತ್ನಿಸಿದ್ದರು.

ಇದೀಗ ಮತ್ತೆ ಈ ಮೂವರು ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಸತ್ಯನಾರಾಯಣ್ ಅವರ ಪುತ್ರ ಸತ್ಯಪ್ರಕಾಶ್ ಅವರಿಗೆ ಟಿಕೆಟ್ ನೀಡಿದರೆ ಕ್ಷೇತ್ರ ಕೈ ತಪ್ಪುವುದಿಲ್ಲ ಎಂದು ಸತ್ಯನಾರಾಯಣ್ ಅಭಿಮಾನಿಗಳು ಜೆಡಿಎಸ್ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ. ಆದರೂ ಕಲ್ಕೆರೆ ರವಿಕುಮಾರ್ ಅವರು ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ.

ಆದರೆ ರವಿಕುಮಾರ್ ಬಗ್ಗೆ ಜಿ¯್ಲÁ ಜೆಡಿಎಸ್ ನಾಯಕರಲ್ಲಿ ಒಲವಿಲ್ಲ. ಪತ್ನಿ ಲತಾ ಅವರನ್ನು ಜಿಪಂ ಅಧ್ಯಕ್ಷಗಾದಿಗೇರಿಸುವ ಸಂದರ್ಭದಲ್ಲಿ ವರಿಷ್ಠರಿಗೆ ಕೊಟ್ಟ ಮಾತನ್ನು ನೆರವೇರಿಸುವಲ್ಲಿ ವಿಫಲರಾಗಿದ್ದಾರೆ. ಅಧಿಕಾರದ ಆಸೆಯಿಂದ ಜಿಪಂ ಸ್ಥಾನವನ್ನು ಬಿಟ್ಟು ಕೊಡದೆ ಜೆಡಿಎಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿರುವ ರವಿಕುಮಾರ್ ಅವರಿಗೆ ಈ ಬಾರಿ ಟಿಕೆಟ್ ದಕ್ಕುವುದಿಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

ನನಗೆ ಟಿಕೆಟ್ ನೀಡದಿದ್ದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನ ಜಯಚಂದ್ರ ಅವರು ಜಯಶಾಲಿಗಳಾಗಿದ್ದಾರೆ ಎಂಬ ರವಿಕುಮಾರ್ ಹೇಳಿಕೆಯೂ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಭಾಗದ ಪ್ರಭಾವಿಗಳಾಗಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವುದು ಖಚಿತಪಟ್ಟಿದೆ.

# ಜೆಡಿಎಸ್‍ನತ್ತ ರಾಜೇಶ್‍ಗೌಡ?:
ಮಾಜಿ ಸಂಸದ ಮೂಡಲಗಿರಿಯಪ್ಪನವರ ಪುತ್ರ ಡಾ.ರಾಜೇಶ್‍ಗೌಡ ಅವರು ಶಾಸಕರಾಗುವ ಕನಸು ಹೊತ್ತಿದ್ದು , ಜೆಡಿಎಸ್‍ನಿಂದ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ ಎಂದು ಘೋಷಿಸಿಕೊಂಡಿದ್ದಾರೆ. ಕಾಂಗ್ರೆಸ್‍ನಿಂದ ಟಿಕೆಟ್ ಸಿಗುವುದು ಅನುಮಾನವಾಗಿರುವುದರಿಂದ ಜೆಡಿಎಸ್‍ನಿಂದ ಸ್ಪರ್ಧಿಸಿದರೆ ಅನಾಯಾಸವಾಗಿ ಗೆಲುವು ಸಾಧಿಸಬಹುದು ಎಂಬ ನಿರೀಕ್ಷೆಯಲ್ಲಿರುವ ರಾಜೇಶ್‍ಗೌಡ ಅವರು ಆ ಪಕ್ಷದಿಂದಲೂ ಟಿಕೆಟ್ ಸಿಗದಿದ್ದರೆ ಬಿಜೆಪಿಯತ್ತ ಮುಖ ಮಾಡಿದರೂ ಆಶ್ಚರ್ಯ ಪಡುವಂತಿಲ್ಲ.

ಬಿಜೆಪಿ ಲೆಕ್ಕಾಚಾರವೇನು?:ಜೆಡಿಎಸ್ ಭದ್ರಕೋಟೆ ಶಿರಾದಲ್ಲಿ ಕೇಸರಿ ಬಾವುಟ ಹಾರಿಸುವ ಲೆಕ್ಕಾಚಾರದಲ್ಲಿರುವ ಬಿಜೆಪಿ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದೆ.ಸತ್ಯನಾರಾಯಣ್ ಅವರ ಪುತ್ರ ಸತ್ಯಪ್ರಕಾಶ್ ಅವರನ್ನು ಬಿಜೆಪಿಗೆ ಕರೆ ತಂದು ಗೆಲ್ಲಿಸಿಕೊಳ್ಳುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಉಮೇದಿನಲ್ಲಿದ್ದಾರೆ ಸಚಿವ ಮಾಧುಸ್ವಾಮಿ.

ಈ ಹಿಂದೆ ಎಸ್.ಆರ್.ಗೌಡ , ಬಿ.ಕೆ.ಮಂಜುನಾಥ್ ಅವರುಗಳು ಶಿರಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಗೆಲವು ಸಾಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸತ್ಯನಾರಾಯಣ್ ಅವರ ಪುತ್ರನಿಗೆ ಗಾಳ ಹಾಕಲು ಸಿದ್ಧತೆ ನಡೆಸಲಾಗಿದೆ. ಒಂದು ವೇಳೆ ಸತ್ಯಪ್ರಕಾಶ್ ಬಿಜೆಪಿಗೆ ಬರದಿದ್ದರೆ ಶಿರಾ ಕ್ಷೇತ್ರದ ಪ್ರಭಾವಿ ವ್ಯಕ್ತಿಯಾಗಿರುವ ಹಿರಿಯೂರು ಶಾಸಕಿ ಪೂರ್ಣಿಮಾ ಅವರ ಪತಿ ಡಿ.ಟಿ.ಶ್ರೀನಿವಾಸ್ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಗಳಿವೆ.

ಯಾದವ ಸಂಘದ ಅಧ್ಯಕ್ಷರಾಗಿರುವ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಎರಡನೆ ಪ್ರಬಲ ಸಮುದಾಯವಾಗಿರುವ ಯಾದವ ಬಾಂಧವರು ಶ್ರೀನಿವಾಸ್ ಕೈ ಹಿಡಿಯಲಿದ್ದಾರೆ ಎಂಬುದು ಬಿಜೆಪಿ ವಿಶ್ವಾಸವಾಗಿದೆ.

ಕಲ್ಕೆರೆ ರವಿಕುಮಾರ್ ಅವರಿಗೆ ಜೆಡಿಎಸ್ ಟಿಕೆಟ್ ನೀಡದಿದ್ದರೆ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಇದು ಜಯಚಂದ್ರ ಅವರಿಗೆ ವರದಾನವಾಗುವ ನಿರೀಕ್ಷೆ ಇದೆ. ಈ ಮಧ್ಯೆ ಬಿಜೆಪಿ ಶ್ರೀನಿವಾಸ್‍ಗೆ ಟಿಕೆಟ್ ನೀಡಿದರೆ ಪ್ರಬಲ ಪೈಪೋಟಿ ಎದುರಾಗಲಿದೆ.

ಮನೆಯೊಂದು ಮೂರು ಬಾಗಿಲು ಎಂಬಂತಾಗಿರುವ ಬಿಜೆಪಿ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿ ಈ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನ ಸೆಳೆಯುವ ಉಮೇದಿನಲ್ಲಿದ್ದಾರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶ್‍ಗೌಡ.

ಒಟ್ಟಾರೆ ಜೆಡಿಎಸ್ ಭದ್ರಕೋಟೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದು , ಮತದಾರ ಪ್ರಭುಗಳು ಯಾವ ಪಕ್ಷಕ್ಕೆ ಆಶೀರ್ವಾದ ನೀಡುತ್ತಾರೋ ಕಾದು ನೋಡಬೇಕು.