ತುಮಕೂರು,ಆ.3- ಜಿಲ್ಲೇಯಲ್ಲಿ ಎಡಬಿಡದೆ ಸುರಿಯುತ್ತಿರುವ ರಣ ಮಳೆಗೆ ಜಿಲ್ಲೇಯ ಮಂಗಳಾ, ಮಾರ್ಕೋನಹಳ್ಳಿ, ಗಾಯಿತ್ರಿ ಜಲಾಶಯಗಳು ಭರ್ತಿಯಾಗಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರಾಕೃತಿಕ ವಿಪತ್ತನ್ನು ಎದುರಿಸಲು ಜಿಲ್ಲೇ ಸಿದ್ಧವಾಗುತ್ತಿದೆ.
ನಿನ್ನೆ ಸಂಜೆ ಶಾಲೆ ಮುಗಿಸಿಕೊಂಡು ಬರುತ್ತಿದ್ದ ಶಿಕ್ಷಕರೊಬ್ಬರು ಕೊಚ್ಚಿ ಕೊಂಡು ಹೋಗಿ ಸಾವನ್ನಪ್ಪಿರುವ ಘಟನೆ ಸಿರಾ ತಾಲ್ಲೂಕಿನ ಚನ್ನನಕುಂಟೆ ಗ್ರಾಮದಲ್ಲಿ ನಡೆದಿದೆ. ಶಿರಾ ನಗರದ ದಾವದ್ ಪಾಳ್ಯದ ಶಿಕ್ಷಕ ಆರೀಫುಲ್ಲೇ ಅವರು ಶಾಲೆ ಮುಗಿಸಿಕೊಂಡು ವಾಪಾಸ್ಸಾಗುವ ವೇಳೆ ಸಿರಾ ದೊಡ್ಡಕೆರೆಯ ಕೋಡಿ ನೀರಿನ ಸೆಳೆತಕ್ಕೆ ಸಿಲುಕಿ ಬೈಕ್ ನೊಂದಿಗೆ ಕೊಚ್ಚಿಕೊಂಡು ಹೋಗಿದ್ದಾರೆ.
ಈ ಮೂಲಕ ಜಿಲ್ಲೇಯಲ್ಲಿ ಮಳೆ ಅವಾಂತರಕ್ಕೆ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೇರಿಕೆಯಾಗಿದ್ದು, ರಾತ್ರಿ ಸುರಿದ ಮಳೆಯಿಂದ ಮಧುಗಿರಿ ತಾಲ್ಲೂಕಿನಲ್ಲಿ ಸುವರ್ಣಮುಖಿ, ಜಯಮಂಗಲಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ಎಚ್ಚರಿಕೆ ವಹಿಸುವಂತೆ ತಾಲ್ಲೂಕು ಆಡಳಿತ ಸೂಚಿಸಿದೆ.
ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಗೌರೀಪುರದಲ್ಲಿ ಐದು ಮನೆ ಕುಸಿದಿದ್ದು, ಕೋಳಿಫಾರಂ ಜಲಾವೃತವಾಗಿದೆ ಇನ್ನೂ ತುಮಕೂರು ನಗರದ ಗಂಗಸಂದ್ರ ಬಳಿಯ ಮಯೂರ ನಗರಕ್ಕೆ ನೀರು ನುಗ್ಗಿದ್ದು, ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ನಾಗರೀಕರು ಪರದಾಡುತ್ತಿದ್ದಾರೆ.
ಗೂಳೂರು, ಹೆಬ್ಬೂರು ಗ್ರಾಮಗಳಲ್ಲಿ ಮನೆ ಕುಸಿತವಾಗಿದ್ದು, ನಗರದಲ್ಲಿನ ಪಿ.ಎಚ್.ಕಾಲೋನಿಯಲ್ಲಿ ಮನೆ ಕುಸಿತವಾಗಿದೆ, ಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೆ 22 ಮನೆಗಳು ಕುಸಿತವಾಗಿವೆ ಎನ್ನುವ ಮಾಹಿತಿ ಈ ಸಂಜೆಗೆ ಲಭ್ಯವಾಗಿದೆ.
ಮಳೆ ಹಾನಿಯಿಂದ ವಿದ್ಯುತ್ ಶಾಕ್ಗೆ ಒಳಗಾಗಿ ಸಾವನ್ನಪ್ಪಿದ್ದ ನಗರದ ವೀರಣ್ಣ ಅವರ ಕುಟುಂಬಕ್ಕೆ ತಹಶೀಲ್ದಾರ್ ಮೋಹನ್ ಕುಮಾರ್ ಅವರು 5 ಲಕ್ಷ ಪರಿಹಾರವನ್ನು ವಿತರಿಸಿದ್ದಾರೆ.
ಪಾಲಿಕೆಯ ಆರೋಗ್ಯಾಧಿಕಾರಿಗಳಾದ ಡಾ. ಮದಕರಿನಾಯಕ, ರಕ್ಷಿತ್ ಎನ್.ಪಿ. ಅವರು ಪ್ರಾಕೃತಿಕ ವಿಪತ್ತು ನಿರ್ವಹಣಾ ನೋಡೆಲ್ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ, ಸಹಕಾರ ನೀಡುವುದು, ಅನಾಹುತ ನಡೆದ ಸ್ಥಳಗಳ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ.