ಬೆಂಗಳೂರು, ಜು.16- ಪ್ರೀತಿಸಿದ ಯುವತಿಯ ಮದುವೆಯಾಗಿದ್ದರೂ ಆಕೆಯ ಮನೆ ಬಳಿ ಹೋದ ಯುವಕನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಜಾವೀದ್ ಖಾನ್(25) ಕೊಲೆಯಾದ ಯುವಕ. ಈತ ಸಿಸಿ ಟಿವಿ ಬಿಸ್ನೆಸ್ ಮಾಡುತ್ತಿದ್ದನು.
ಜಾವೀದ್ ಖಾನ್ ಪ್ರೀತಿಸುತ್ತಿದ್ದ ಯುವತಿ ಬೇರೆ ಯುವಕನ ಜೊತೆ ವಿವಾಹವಾಗಿದ್ದು, ಪತಿಯೊಂದಿಗೆ ಶಿವಾಜಿನಗರದ ಎಚ್‍ಬಿಎಸ್ ಅಸ್ಪತ್ರೆ ಬಳಿಯ ಮನೆಯ 3ನೆ ಮಹಡಿಯಲ್ಲಿ ವಾಸವಾಗಿದ್ದಾರೆ. ಇಂದು ಬೆಳಗ್ಗೆ 9.30ರ ಸುಮಾರಿನಲ್ಲಿ ಆಕೆಯ ಮನೆ ಬಳಿ ಜಾವೀದ್ ಖಾನ್ ಹೋಗಿದ್ದಾನೆ. ಆ ಸಂದರ್ಭದಲ್ಲಿ ಆರೋಪಿ ಜೊತೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದಾಗ, ಮನೆಯಲ್ಲಿದ್ದ ಚಾಕು ತಂದು ಚಾವೀದ್ ಖಾನ್ ಕುತ್ತಿಗೆಗೆ ಚುಚ್ಚಿದ್ದಾನೆ.
ತೀವ್ರ ರಕ್ತ ಸ್ರಾವದಿಂದ ಕುಸಿದು ಬಿದ್ದ ಜಾವೀದ್ ಖಾನ್‍ನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಈ ಬಗ್ಗೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.