ಶಿವಾಜಿನಗರ, ಚಿಕ್ಕಪೇಟೆ, ಮಹದೇವಪುರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ

Social Share

ಬೆಂಗಳೂರು, ಜ.15- ಮತದಾರರ ಪಟ್ಟಿಯಿಂದ ಅನಗತ್ಯವಾಗಿ ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ ಎಂಬ ವ್ಯಾಪಕ ಆರೋಪ ಕೇಳಿ ಬಂದಿದ್ದ ಬೆಂಗಳೂರಿನ ಶಿವಾಜಿನಗರ, ಚಿಕ್ಕಪೇಟೆ, ಮಹದೇವಪುರ, ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.

ಕಳೆದ ನವೆಂಬರ್ 9ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿದಾಗ ಮತದಾರರ ಪಟ್ಟಿಯಿಂದ ಹಲವರ ಹೆಸರನ್ನು ಕೈಬಿಡಲಾಗಿದೆ ಎಂಬ ಆರೋಪ ಮಾಡಲಾಗಿತ್ತು. ಅಲ್ಲದೆ, ಮತದಾರರ ಮಾಹಿತಿಯನ್ನು ಚಿಲುಮೆ ಎಂಬ ಖಾಸಗಿ ಸಂಸ್ಥೆ ಸಂಗ್ರಹಿಸಿದೆ ಎಂಬ ಆರೋಪ ಮಾಡಲಾಗಿತ್ತು. ಪಟ್ಟಿಯಿಂದ ತೆಗೆದು ಹಾಕಲಾಗಿರುವ ಮತದಾರರ ಹೆಸರನ್ನು ಮರು ಸೇರ್ಪಡೆ ಮಾಡುವಂತೆ ಆಯೋಗವನ್ನು ವಿವಿಧ ರಾಜಕೀಯ ಪಕ್ಷಗಳು ಆಗ್ರಹಿಸಿದ್ದವು.

ಶಿವಾಜಿನಗರ ಕ್ಷೇತ್ರದಲ್ಲಿ 4037 ಮತದಾರರು ಸೇರ್ಪಡೆಯಾಗಿದ್ದರೆ, 828 ಮತದಾರರನ್ನು ತೆಗೆದು ಹಾಕಲಾಗಿದೆ. ಚಿಕ್ಕಪೇಟೆ ಕ್ಷೇತ್ರದಲ್ಲಿ 3064 ಮತದಾರರು ಸೇರ್ಪಡೆಯಾಗಿದ್ದರೆ 806 ಮತದಾರರನ್ನು ಕೈಬಿಡಲಾಗಿದೆ, ಮಹದೇವಪುರ ಕ್ಷೇತ್ರದಲ್ಲಿ ಅತಿ ಹೆಚ್ಚು 10029 ಮತದಾರರು ಸೇರ್ಪಡೆಯಾಗಿದ್ದರೆ, 1776 ಮತದಾರರನ್ನು ತೆಗೆದು ಹಾಕಲಾಗಿದೆ.

ಒಟ್ಟು 17130 ಮತದಾರರು ಸೇರ್ಪಡೆಯಾಗಿದ್ದರೆ, 3410 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.ಮೃತಪಟ್ಟ, ಸ್ಥಳಾಂತರಗೊಂಡ, ಪುನರಾವರ್ತನೆಯಾಗಿದ್ದ 3410 ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಮೂರು ಕ್ಷೇತ್ರಗಳಲ್ಲಿ ಒಟ್ಟು 9,80,542 ಮತದಾರರಿದ್ದಾರೆ. ಇವರಲ್ಲಿ 5,15,983 ಪುರುಷ 4,64,415 ಮಹಿಳಾ ಹಾಗೂ 144 ಇತರೆ ಮತದಾರರಿದ್ದಾರೆ. ಕರಡು ಪಟ್ಟಿಯಲ್ಲಿ 9,66,816 ಮತದಾರರಿದ್ದರು.ಅಂತಿಮ ಪಟ್ಟಿಯಲ್ಲಿ ಶಿವಾಜಿನಗರ ಕ್ಷೇತ್ರದಲ್ಲಿ 1,94,937, ಚಿಕ್ಕಪೇಟೆ ಕ್ಷೇತ್ರದಲ್ಲಿ 2,13,066 ಹಾಗೂ ಮಹದೇವಪುರ ಕ್ಷೇತ್ರದಲ್ಲಿ 5,72,539 ಮತದಾರರಿದ್ದಾರೆ.

ಈ ಮೂರು ಕ್ಷೇತ್ರಗಳಲ್ಲಿ 6245 ಯುವ ಮತದಾರರು ಸೇರ್ಪಡೆಯಾಗಿದ್ದಾರೆ. ಇದರಲ್ಲಿ 3296 ಪುರುಷ ಹಾಗೂ 2949 ಮಹಿಳಾ ಮತದಾರರು ಸೇರ್ಪಡೆಯಾಗಿದ್ದಾರೆ. ನವೆಂಬರ್ 11ರಂದು ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಆಕ್ಷೇಪಣೆ ಸಲ್ಲಿಸಲು ಡಿ. 12ರವರೆಗೂ ಕಾಲಾವಕಾಶ ನೀಡಲಾಗಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತಂತೆ ವಿಶೇಷ ಅಭಿಯಾನವನ್ನು ಈ ಮೂರು ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿತ್ತು. ಜನವರಿ 6ರಂದು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ಇಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

21904 ನಮೂನೆಗಳನ್ನು ಸ್ವೀಕರಿಸಲಾಗಿದ್ದು, ಯೂರೆನೆಟ್ ಮೂಲಕ 1511, ಆಪ್ಲೈನ್ ಮೂಲಕ 100 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಎನ್ವಿಎಸ್ಪಿ ಮೂಲಕ 6010, ಮತದಾರರ ಸಹಾಯವಾಣಿ ಆಪ್ ಮೂಲಕ 7243, ಗರುಡ ಆಪ್ ಮೂಲಕ 3733, ವೋಟರ್ ಪೋರ್ಟಲ್ ಮೂಲಕ 3407 ಸೇರಿದಂತೆ ಒಟ್ಟು ಆನ್ಲೈನ್ನಲ್ಲಿ 20343 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಹೇಳಿದೆ.

#Shivajinagara, #chikkapet, #VoterList,

Articles You Might Like

Share This Article