ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ : ಡಿ.ಕೆ.ಶಿವಕುಮಾರ್

Spread the love

ಬೆಂಗಳೂರು,ಜ.19-ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ. ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಯ ರೇಖೆ ಈಗಾಗಲೇ ನಿಗದಿಯಾಗಿದೆ. ನಕ್ಷೆ ಕೂಡ ಇದೆ. ಅದರಲ್ಲಿ ಒಂದಿಂಚು ಕೂಡ ಅದಲುಬದಲು ಆಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿಕೆ ಖಂಡನೀಯ. ಎರಡೂ ರಾಜ್ಯಗಳ ನಕ್ಷೆ ರಾಜ್ಯ ವಿಂಗಡಣೆ ವೇಳೆಯೇ ನಿಗದಿಯಾಗಿದೆ. ಅದರಲ್ಲಿ ಮತ್ತೆ ಯಾವುದೇ ಬದಲಾವಣೆ ಇಲ್ಲ ಎಂದರು.

ಬಿಜೆಪಿ ಸರ್ಕಾರ ಏಕಾಏಕಿ ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿ ಗಡಿಭಾಗದಲ್ಲಿ ಗೊಂದಲ ಮೂಡಿಸಿತ್ತು. ರಾಜಕೀಯ ಕಾರಣಕ್ಕಾಗಿ ಇದನ್ನು ಮಾಡಬೇಕಾಗಿರಲಿಲ್ಲ. ಮರಾಠಿಗರು ನಮ್ಮವರೇ. ಕನ್ನಡ ನಾಡಿನಲ್ಲೇ ಹುಟ್ಟಿ ಬೆಳೆದು ಕನ್ನಡ ಮಾತನಾಡುವ ಮರಾಠಿಗರಿಗೆ ನಾವು ಸಹಾಯ ಮಾಡಬೇಕು. ಅದರ ಹಿಂದೆ ರಾಜಕೀಯ ಇರಬಾರದು ಎಂದು ಹೇಳಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಗೂ ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕೆಂದು ಒತ್ತಾಯಿಸಿ ನಾಳೆ ರಾಜಭವನ್ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

Facebook Comments