ಕಾಂಗ್ರೆಸ್‍ನಲ್ಲಿ ಯಾವುದೇ ಭಿನ್ನಮತ ಇಲ್ಲ : ಡಿಕೆಶಿ

ಬೆಂಗಳೂರು, ಮಾ.16-ಕಾಂಗ್ರೆಸ್‍ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅನಗತ್ಯವಾಗಿ ವದಂತಿಗಳಿಗೆ ಯಾರೂ ಕಿವಿಕೊಡಬೇಡಿ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಪಕ್ಷವನ್ನು ಬಲ ಪಡಿಸುತ್ತೇವೆ ಎಂದು ಕೆಪಿಸಿಸಿಯ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಂದು ಸದಾಶಿವನಗರದಲ್ಲಿ ಮಾಜಿ ಸಚಿವ ಹಾಗೂ ಕೆಪಿಸಿಸಿ ಹುದ್ದೆಯ ಆಕಾಂಕ್ಷಿಯಾಗಿದ್ದ ಎಂ.ಬಿ.ಪಾಟೀಲ್ ಅವರ ಮನೆಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಉಪ ಚುನಾವಣೆ ಬಳಿಕ ದಿನೇಶ್‍ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನೂತನ ಅಧ್ಯಕ್ಷರ ಆಯ್ಕೆಗೆ ಸಂಬಂಧಪಟ್ಟಂತೆ ದೆಹಲಿಯಿಂದ ವೀಕ್ಷಕರು ಆಗಮಿಸಿದಾಗ ನನಗೇ ಗೊತ್ತಿಲ್ಲದಂತೆ ಎಂ.ಬಿ.ಪಾಟೀಲ್ ಸೇರಿದಂತೆ ಬಹಳಷ್ಟು ಮಂದಿ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಬೇಕು ಎಂದು ಹೇಳಿದ್ದರು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗುತ್ತಿದೆ.

ರಾಜ್ಯದ ಶೇ.99ರಷ್ಟು ನಾಯಕರು ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಬೇಕೆಂದು ಬಯಸಿದ್ದರು. ಅದನ್ನು ಸಮಿತಿಯ ಮುಂದೆ ಕೂಡ ವ್ಯಕ್ತಪಡಿಸಿದ್ದರು. ಊಹಾಪೋಹಗಳಿಗೆ ತೆರೆ ಎಳೆಯಿರಿ ಎಂದರು. ವ್ಯಕ್ತಿಗತವಾಗಿ ಯಾರೊಂದಿಗೂ ಭಿನ್ನಾಭಿಪ್ರಾಯಗಳಿಲ್ಲ. ಸಿದ್ದಾಂತದ ಆಧಾರದ ಮೇಲೆ ನಾವೆಲ್ಲ ಒಂದೇ ಪಕ್ಷದಲ್ಲಿದ್ದೇವೆ. ಸಂಘಟನೆ ಮಾಡುತ್ತಿದ್ದೇವೆ.

ಎಂ.ಬಿ.ಪಾಟೀಲ್ ಅವರ ತಂದೆ ಇದ್ದಾಗ ನಾನು ಶಾಸಕನಾಗಿದ್ದೆ ಎಂದು ಸ್ಮರಿಸಿದ ಡಿ.ಕೆ.ಶಿವಕುಮಾರ್, ಜನರ ಭಾವನೆಗೆ ತಕ್ಕಂತೆ ನಾವೆಲ್ಲ ಒಟ್ಟಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನೆಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.