ಡಿಕೆಶಿಗೆ ಸಿಎಂ ಬೊಮ್ಮಾಯಿ ತಿರುಗೇಟು

Spread the love

ಸಿಂಧಗಿ,ಅ.25-ಈ ಹಿಂದೆ ಉಪಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರ ದಲ್ಲಿದ್ದಾಗ ಏನೇನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ. ವಿಧಾನಸೌಧಕ್ಕೆ ಬೀಗ ಜಡಿದು ಇಡೀ ಮಂತ್ರಿ ಮಂಡಲ ಪ್ರಚಾರ ನಡೆಸುತ್ತಿದೆ ಎಂಬ ಡಿ.ಕೆ.ಶಿವಕುಮಾರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸರ್ಕಾರದ ಯಾವ ಕೆಲಸಗಳು ನಿಂತಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿವೆ ಎಂದು ಸಮರ್ಥಿಸಿಕೊಂಡರು.

ಈ ಹಿಂದೆ ಮಹಾಚುನಾವಣೆ, ಉಪಚುನಾವಣೆ, ಸ್ಥಳೀಯ ಸಂಸ್ಥೆ ಸೇರಿದಂತೆ ಮತ್ತಿತರ ಚುನಾವಣೆ ನಡೆದಾಗ ಕಾಂಗ್ರೆಸ್ ಯಾವ ರೀತಿ ನಡೆದುಕೊಂಡಿದೆ ಎಂಬುದು ನಮಗೂ ಗೊತ್ತಿದೆ. ಅವರಿಂದ ನಾವೇನು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಟಾಂಗ್ ನೀಡಿದರು.

ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಮುಗಿಸಲು ಸಂಚು ರೂಪಿಸಿವೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿಯವರ ಆರೋಪಕ್ಕೂ ತಿರುಗೇಟು ಕೊಟ್ಟ ಬೊಮ್ಮಾಯಿ, ನಾವು ಯಾವ ಪಕ್ಷವನ್ನು ಸಹ ಮುಗಿಸಲು ಹೊರಟಿಲ್ಲ ಎಂದು ಸ್ಪಷ್ಟಪಡಿಸಿದರು.

ನಾವು ನಮ್ಮ ಸಂಘಟನೆಯ ಆಧಾರದ ಮೇಲೆ ಪ್ರಚಾರ ಮಾಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಮಾಡಿರುವ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದೇವೆ. ಜೆಡಿಎಸ್ ಮುಗಿಸುವ ಉದ್ದೇಶ ನಮಗಿಲ್ಲ ಎಂದು ಹೇಳಿದರು.  ನಾವು ಬೇರೆ ಪಕ್ಷದತ್ತ ಕಣ್ಣೆತ್ತಿಯೂ ನೋಡಿಲ್ಲ. ಅದರ ಅಗತ್ಯವೂ ಇಲ್ಲ. ನಮ್ಮ ಸಂಘಟನೆಯೇ ಪ್ರಬಲವಾಗಿರುವುದರಿಂದ ಅನ್ಯ ಪಕ್ಷಗಳನ್ನು ಮುಗಿಸುವ ದರ್ದು ನಮಗಿಲ್ಲ ಎಂದು ತಿಳಿಸಿದರು.

ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಹಣ ಹಂಚಿಕೆ ಮಾಡುತ್ತಿದೆ ಎಂಬ ಶಾಸಕ ಜಮೀರ್ ಆರೋಪವನ್ನು ಸಿಎಂ ತಿರಸ್ಕರಿಸಿದರು. ಇವೆಲ್ಲವೂ ವಿಪರೀತ ಕಲ್ಪನೆಗಳು ಅಷ್ಟೇ. ಇದಕ್ಕೆ ಯಾವುದೇ ಆಧಾರಗಳಿಲ್ಲ. ಕಲ್ಪನೆ ಮಾಡಿಕೊಂಡು ಸುಮ್ಮನೆ ಪ್ರಚಾರಕ್ಕಾಗಿ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಸಮಂಜಸ ವಲ್ಲವೆಂದು ಹೇಳಿದರು.

Facebook Comments