ಸಿದ್ದಗಂಗಾ ಶ್ರೀ ಆರೋಗ್ಯದಲ್ಲಿ ಚೇತರಿಕೆ, ಇಂದು ವಾರ್ಡ್‍ಗೆ ಶಿಫ್ಟ್ ..?

Siddaganga-Swamiji--01
ಚೆನ್ನೈ,ಡಿ.13- ಇಲ್ಲಿನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರು ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇಂದು ತೀವ್ರ ನಿಗಾ ಘಟಕದಿಂದ ವಾರ್ಡ್‍ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ವೈದ್ಯರಾದ ಡಾ.ಪರಮೇಶ್ವರಪ್ಪ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶ್ರೀಗಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ನಿನ್ನೆ ರಾತ್ರಿಯಿಂದ ಇಡ್ಲಿ ಹಾಗೂ ಬೇಯಿಸಿದ ಬೇಳೆಯನ್ನು ನೀಡಲಾಗಿದೆ. ದ್ರವಾಹರ ಸೇವಿಸುತ್ತಿದ್ದಾರೆ.

ಕಿರಿಯ ಶ್ರೀಗಳು ಮಾತನಾಡಿ, ಐಸಿಯುನಲ್ಲಿ ಇದ್ದಂತೆಯೇ ವಾರ್ಡ್‍ನಲ್ಲಿ ಎಚ್ಚರಿಕೆ ವಹಿಸಬೇಕೆಂದು ವೈದ್ಯರು ಸಲಹೆ ಮಾಡಿದ್ದಾರೆ. ಹಾಗಾಗಿ ಸದ್ಯ ಶ್ರೀಗಳನ್ನು ನೋಡಲು ಯಾರೂ ಬರುವುದು ಬೇಡ. ಸೋಂಕಾದರೆ ಕಷ್ಟದ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮುಂದಿನ ವಾರದಿಂದ ಭಕ್ತರು ಶ್ರೀಗಳನ್ನು ಮಠದಲ್ಲೇ ನೋಡಬಹುದು. ಶ್ರೀಗಳನ್ನು ನೋಡಲು ಬರುವವರ ಸಂಖ್ಯೆ ಹೆಚ್ಚಾದರೆ ಅಕ್ಕಪಕ್ಕದ ರೋಗಿಗಳಿಗೂ ತೊಂದರೆಯಾಗುತ್ತದೆ. ಹೀಗಾಗಿ ಯಾರೂ ಬರಬೇಡಿ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರಿಗಳು ಮನವಿ ಮಾಡಿದ್ದಾರೆ. ವೈದ್ಯರೊಂದಿಗೆ ಚರ್ಚಿಸಿ ಯಾವಾಗ ಡಿಸ್ಚಾರ್ಚ್ ಮಾಡಬೇಕು ಎನ್ನುವುದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಶೀಘ್ರವೇ ಶ್ರೀಗಳು ಭಕ್ತರ ದರ್ಶನಕ್ಕೆ ಬರುತ್ತಾರೆ ಎಂದು ಸ್ಪಷ್ಟಪಡಿಸಿದರು.

ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಡಿ.8ರಂದು ಪಿತ್ತಕೋಶ ಸೋಂಕಿನ ಆಪರೇಷನ್‍ಗೆ ಸಿದ್ದಗಂಗಾಶ್ರೀಗಳು ಒಳಗಾಗಿದ್ದರು. ಬಳಿಕ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಸದ್ಯ ಶ್ರೀಗಳು ಸ್ಪೆಷಲ್ ವಾರ್ಡ್‍ಗೆ ಶಿಫ್ಟ್ ಆದರೆ ವಾಕಿಂಗ್ ಮಾಡುವ ಸಾಧ್ಯತೆಯಿದೆ.

Sri Raghav

Admin