ಡಿ.ಕೆ. ಶಿವಕುಮಾರ್ ಬಂಧನ : ರಾಜ್ಯಾದ್ಯಂತ ಬಿಗಿಭದ್ರತೆಗೆ ಗೃಹ ಸಚಿವರ ಸೂಚನೆ

ಬೆಂಗಳೂರು, ಸೆ.4- ಮಾಜಿ ಸಚಿವ ಡಿ.ಕೆ.ಶಿವಕುಮಾರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಕ್ಕೆ ಅಡ್ಡಿಮಾಡಬೇಡಿ, ಆದರೆ, ಸಾರ್ವಜನಿಕರ ಆಸ್ತಿಪಾಸ್ತಿ, ವಾಹನಗಳ ಮೇಲೆ ಕಲ್ಲೆಸೆಯುವುದು, ಬೆಂಕಿ ಹಚ್ಚುವುದು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳನ್ನು ಕೈಗೊಂಡರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ತಾಕೀತು ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾನೂನು ಸುವ್ಯವಸ್ಥೆ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ ಎಂದರು. ರಾತ್ರೀಯಿಡಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪ್ರತಿ ಕ್ಷಣದ ಮಾಹಿತಿ ಪಡೆಯುತ್ತಿದ್ದೇನೆ ಎಂದ ಅವರು, ಪ್ರತಿಭಟನೆ ನಡೆಸಲು ನಮ್ಮದೇನು ಅಭ್ಯಂತರವಿಲ್ಲ.

ಆದರೆ, ಸಾರ್ವಜನಿಕರ ಆಸ್ತಿಗೆ ತೊಂದರೆಯಾದರೆ ಪೊಲೀಸರು ಸುಮ್ಮನೆ ಕೈ ಕಟ್ಟಿ ಕೂರಲು ಆಗುವುದಿಲ್ಲ. ರಾಜ್ಯಾದ್ಯಂತ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. ವದಂತಿಗಳಿಗೆ ಸಾರ್ವಜನಿಕರು ಕಿವಿಕೊಡಬಾರದು ಎಂದು ಮನವಿ ಮಾಡಿದರು. ಡಿ.ಕೆ.ಶಿವಕುಮಾರ್ ಬಂಧನದ ನಂತರ ಕೆಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಟೈರ್ ಮತ್ತು ಬಸ್‍ಗಳಿಗೆ ಬೆಂಕಿ ಹಚ್ಚಲಾಗಿದೆ. ಈಗಲೂ ನಾನು ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಮನವಿ ಮಾಡುತ್ತೇನೆ. ಶಾಲಾ ಮಕ್ಕಳು, ಸಾರ್ವಜನಿಕರು, ಮಹಿಳೆಯರಿಗೆ ತೊಂದರೆ ಉಂಟಾಗದಂತೆ ಪ್ರತಿಭಟನೆ ಮಾಡಿ ಎಂದು ಕೋರಿಕೊಂಡರು.

ಇಂದೂ ಕೂಡ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆಯಲಾಗಿದೆ. ಪ್ರತಿಭಟನೆಯ ನೆಪದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಾರೆ. ಈಗಾಗಲೇ ಐದಾರು ಬಸ್‍ಗಳಿಗೆ ಬೆಂಕಿ ಹಚ್ಚಿ ಹಾನಿ ಮಾಡಲಾಗಿದೆ. ಕನಕಪುರ ಹಾಗೂ ಬೆಂಗಳೂರಿನಲ್ಲೂ ಬಸ್‍ಗಳಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಮಾಹಿತಿ ಬಂದಿದ್ದು, ಈ ರೀತಿ ಯಾರೊಬ್ಬರೂ ಸಹನೆ ಕಳೆದುಕೊಳ್ಳಬಾರದು ಎಂದರು.

ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಪೊಲೀಸರಿಗೂ ಸೂಚನೆ ಕೊಡಲಾಗಿದೆ. ಕಾನೂನಿನ ಅಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಕ್ಕೆ ಅಡ್ಡಿ ಮಾಡಬಾರದು ಎಂದು ಪೊಲೀಸರಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಸಹನೆಯಿಂದ ವರ್ತಿಸಬೇಕೆಂದು ಗೃಹ ಸಚಿವರು ಮನವಿ ಮಾಡಿದರು. ಇದಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಗೃಹ ಸಚಿವ ಬಸವರಾಜಬೊಮ್ಮಾಯಿ, ಗುಪ್ತಚರ ಮುಖ್ಯಸ್ಥ ಕಮಲ್‍ಪಂತ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.