ಶಾಸಕರಾದ ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡಗೆ ಜೆಡಿಎಸ್ ಟಿಕೆಟ್ ಡೌಟ್

Social Share

ಬೆಂಗಳೂರು,ಫೆ.5- ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಜೆಡಿಎಸ್‍ನ ಮತ್ತಿಬ್ಬರು ಶಾಸಕರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಇಲ್ಲ. ಜೆಡಿಎಸ್ ಶಾಸಕರಾದ ಗುಬ್ಬಿಯ ಶ್ರೀನಿವಾಸ್, ಕೋಲಾರದ ಶ್ರೀನಿವಾಸ್ ಗೌಡ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರಿಗೂ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತ.

ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದ್ದ ಶಾಸಕರಾದ ಶ್ರೀನಿವಾಸ್ ಹಾಗೂ ಶ್ರೀನಿವಾಸ್ ಗೌಡ ಅವರ ಕ್ಷೇತ್ರಗಳಿಗೆ ಬದಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರ ಶ್ರೀನಿವಾಸ್ ಅವರ ಬದಲಿಗೆ ನಾಗರಾಜ್ ಎಂಬುವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಅದೇ ರೀತಿ ಕೋಲಾರ ಕ್ಷೇತ್ರದಲ್ಲಿ ಶಾಸಕ ಶ್ರೀನಿವಾಸ ಗೌಡ ಅವರ ಬದಲಿಗೆ ಸಿ.ಎಂ.ಆರ್.ಶ್ರೀನಾಥ್ ಅವರನ್ನು ಅಭ್ಯರ್ಥಿಯನ್ನಾಗಿ ಪ್ರಕಟಿಸಲಾಗಿದೆ.

ಕುತೂಹಲ ಕೆರಳಿಸಿದ ಬೊಮ್ಮಾಯಿ ಹಾಗೂ ಬಿಎಸ್‌ವೈ ದೆಹಲಿ ಪ್ರವಾಸ

ಈಗ ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅವರ ಬದಲಿಗೆ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಎ.ಟಿ.ರಾಮಸ್ವಾಮಿ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿರುವ ಆರೋಪದ ಮೇಲೆ ಅರಕಲಗೂಡು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಬದಲಿಸುವ ನಿರ್ಧಾರವನ್ನು ಮಾಡಲಾಗಿದೆ.

ಇದರಿಂದ ಎ.ಟಿ.ರಾಮಸ್ವಾಮಿ ಅವರು ಜೆಡಿಎಸ್‍ನಿಂದ ಮತ್ತಷ್ಟು ಅಂತರ ಕಾಯ್ದುಕೊಂಡು ಕ್ಷೇತ್ರದ ಜನಾಭಿಪ್ರಾಯ ಪಡೆದು ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವ ಉದ್ದೇಶ ಹೊಂದಿದ್ದಾರೆ.

ಎ.ಮಂಜು ಅವರ ಜೊತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡಮೂರು ಸುತ್ತಿನ ಮಾತುಕತೆ ನಡೆಸಿದ್ದು, ಜೆಡಿಎಸ್ ಸೇರುವುದು ನಿಚ್ಚಳವಾಗಿದೆ. ಹೀಗಾಗಿ ರಾಮಸ್ವಾಮಿ ಅವರ ಬದಲಿಗೆ ಮಂಜು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗುತ್ತದೆ.

ಜೆಡಿಎಸ್‍ನಿಂದ ದೂರ ಉಳಿದಿರುವ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಗೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಇಲ್ಲ . ಈ ಕ್ಷೇತ್ರದಲ್ಲೂ ಪಕ್ಷದಿಂದ ಪರ್ಯಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ವರಿಷ್ಠರು ನಿರ್ಧರಿಸಿದ್ದಾರೆ. ಈ ಕ್ಷೇತ್ರದಲ್ಲಿ ಶಿವಲಿಂಗೇಗೌಡ ಬದಲಾಗಿ ಅಶೋಕ್ ಎಂಬುವರಿಗೆ ಟಿಕೆಟ್ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಯುವಜನರಿಗೆ ಆಕಾಶವೇ ಮಿತಿ : ಅವನಿ ಚತುರ್ವೇದಿ

ಇನ್ನೊಂದು ವಾರದೊಳಗೆ ಜೆಡಿಎಸ್‍ನ 2ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಆ ಪಟ್ಟಿಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರ ಸೇರಿದಂತೆ ಸುಮಾರು 60 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ.
ಹಾಸನ, ಅರಕಲಗೂಡು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರಗಳ ಗೊಂದಲದಿಂದಾಗಿ ಮೊದಲ ಪಟ್ಟಿಯಲ್ಲಿ ಹಾಸನ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಆಯ್ಕೆ ಮಾಡಿರಲಿಲ್ಲ.

Shivalinge Gowda, A.T. Ramaswamy, skip, JDS,

Articles You Might Like

Share This Article