ಬೆಂಗಳೂರು, ಫೆ.23- ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆ ಮಾಡಲು ಹಲವು ರೀತಿಯ ತಯಾರಿಗಳನ್ನು ಮಾಡಿಕೊಂಡಿದ್ದ ದುಷ್ಕರ್ಮಿಗಳು, ಸಹಾಯ ಕೇಳುವ ನೆಪದಲ್ಲಿ ಹೆಣ್ಣುಮಕ್ಕಳಿಂದ ಕರೆ ಮಾಡಿಸಿದ್ದರೆ ಎಂಬ ಅನುಮಾನಗಳು ಚರ್ಚೆಗೆ ಗ್ರಾಸವಾಗುತ್ತಿವೆ.
ತನಿಖೆ ಆರಂಭಿಸಿರುವ ಪೊಲೀಸರು ಎಲ್ಲಾ ರೀತಿಯಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊಲೆಯಾದ ದಿನ ಹರ್ಷ ಬೈಕ್‍ನಲ್ಲಿ ಹೋಗದೆ, ಮೂವರು ಸ್ನೇಹಿತರ ಜತೆ ನಡೆದುಕೊಂಡು ಹೋಗುತ್ತಿದ್ದ. ಅಮ್ಮಾ ಕಾಂಟೀನ್‍ವರೆಗೂ ಸ್ನೇಹಿತರು ಜತೆಯಲ್ಲೇ ಇದ್ದರು, ಅಲ್ಲಿ ಸ್ನೇಹಿತರಿಗೆ ಬೈಕ್ ಕೀ ಕೊಟ್ಟ ಹರ್ಷ ಯಾಕೋ ಪರಿಸ್ಥಿತಿ ಸರಿ ಹೋಗುತ್ತಿಲ್ಲ ಬೈಕ್ ತನ್ನಿ ಎಂದು ಹೇಳಿದ್ದಾನೆ.
ಇದಕ್ಕೂ ಮೊದಲು ಹರ್ಷನ ಮೊಬೈಲ್‍ಗೆ ಇಬ್ಬರು ಯುವತಿಯರು ಪದೇ ಪದೇ ವಿಡಿಯೋ ಕಾಲ್ ಮಾಡುತ್ತಿದ್ದರು. ಅದನ್ನು ರಿಸೀವ್ ಮಾಡಿದ್ದ ಆತ ಯಾರು ಎಂದು ಕೇಳಿದ. ಆಗ ಅವರು, ನಿಮ್ಮ ಸ್ನೇಹಿತೆಯರು ಎಂದು ಹೇಳಿದ್ದಾರೆ. ನನಗೆ ನಿಮ್ಮ ಪರಿಚಯ ಇಲ್ಲ ಎಂದು ಕಾಲ್ ಕಟ್ ಮಾಡಿದ್ದರೂ ಕೂಡ ಪದೇ ಪದೇ ಕರೆ ಮಾಡುತ್ತಲೇ ಇದ್ದರು ಎಂದು ಹರ್ಷ ಅವರ ಸ್ನೇಹಿತ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಕರೆ ಮಾಡಿದವರು ಯಾರು? ಏನು ಕಷ್ಟವಾಗಿದೆ ಎಂಬುದು ಅರ್ಥವಾಗದೆ ಗೊಂದಲದಲ್ಲಿದ್ದ ಹರ್ಷ ಯಾಕೊ ಪರಿಸ್ಥಿತಿ ಸರಿಯಿಲ್ಲ ಎಂದು ಅಪಾಯವನ್ನು ಶಂಕಿಸಿದ್ದ ಎನ್ನಲಾಗಿದೆ. ಸ್ನೇಹಿತರು ದೂರ ಇರುವುದನ್ನು ಗಮನಿಸಿ ದುಷ್ಕರ್ಮಿಗಳು ಕಾರಿನಲ್ಲಿ ಬಂದು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ತಕ್ಷಣವೇ ಸ್ನೇಹಿತರ ಮೊಬೈಲ್‍ಗೆ ಕರೆ ಬಂದಿದೆ. ಅವರು ಸ್ಥಳಕ್ಕೆ ಧಾವಿಸುವ ವೇಳೆಗೆ ದುರ್ಘಟನೆ ನಡೆದು ಹೋಗಿತ್ತು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಯ ಪೈಕಿ ಒಬ್ಬ ಹಲವು ದಿನಗಳಿಂದ ಹರ್ಷನ ಚಲನ ವಲನಗಳನ್ನು ಗಮನಿಸುತ್ತಿದ್ದ ಎಂದು ಸ್ನೇಹಿತರು ಹೇಳಿದ್ದಾರೆ.
ತನಿಖೆ ಆರಂಭಿಸಿರುವ ಪೊಲೀಸರು ಎಲ್ಲಾ ರೀತಿಯ ಮಾಹಿತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆಯಾದ ವೇಳೆ ಕರೆ ಮಾಡಿದ್ದು, ಯಾರು ನಿಜವಾಗಿಯೂ ಅವರಿಗೆ ಕಷ್ಟ ವಿತ್ತೆ ಅಥವಾ ಹರ್ಷನ ಗಮನವನ್ನು ಬೇರೆ ಕಡೆ ಸೆಳೆಯಲು ವ್ಯೂಹ ರಚಿಸಲಾಗಿತ್ತೆ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.
ಈ ನಡುವೆ ಆರೋಪಿಗಳು ಕೊಲೆಗೆ 20 ದಿನಗಳ ಹಿಂದೆಯೇ ಸ್ಕೆಚ್ ಹಾಕಿದ್ದರೆಂಬ ಮಾಹಿತಿ ಬಹಿರಂಗಗೊಂಡಿದೆ. ಹರ್ಷ ಓಡಾಡುವ, ನಿಂತು ಕೊಳ್ಳುತ್ತಿದ್ದ ಸ್ಥಳಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಎಲ್ಲೆಲ್ಲಿ ಸಿಸಿಟಿವಿಗಳಿವೆ ಎಂಬುದನ್ನು ಗಮನಿಸಿದ್ದಾರೆ. ಸಾಕ್ಷ್ಯ ಸಿಗದಂತಾಗಲು ಸಿಸಿಟಿವಿ ಇಲ್ಲದ ಕಡೆಯೇ ಕೊಲೆ ಮಾಡುವ ಉದ್ದೇಶ ಹೊಂದಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
ಫೆ.20ರಂದು ಕೊಲೆಯಾಗಿದ್ದು, ಅದಕ್ಕಿಂತ ಮೂರು ದಿನಗಳ ಹಿಂದೆಯೂ ಪ್ರಯತ್ನ ನಡೆದಿತ್ತು. ಆದರೆ ಅಂದು ಹರ್ಷನೊಂದಿಗೆ ಹಲವು ಜನ ಇದ್ದಿದ್ದರಿಂದ ದುಷ್ಕರ್ಮಿಗಳ ಸಂಚು ಯಶಸ್ವಿಯಾಗಿರಲಿಲ್ಲ. ಕೊನೆಗೆ ಕಾದಿದ್ದು ನಿರ್ಜನ ಪ್ರದೇಶದಲ್ಲಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.
