ಶಿವಮೊಗ್ಗ, ಫೆ.21- ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆಗೆ ಹಳೆ ದ್ವೇಷವೇ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಹರ್ಷ ಅವರ ಕೊಲೆಗೆ ಕಳೆದ ಆರು ತಿಂಗಳ ಹಿಂದೆ ನಡೆದಿದೆ ಎನ್ನಲಾದ ಗಲಾಟೆ ಕಾರಣವಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಈ ಹಿಂದೆ ಒಂದು ಕೋಮಿನ ಯುವಕರ ಗುಂಪು ಹಾಗೂ ಹರ್ಷ ನಡುವೆ ಗಲಾಟೆ ನಡೆದಿತ್ತು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.
ಅಂದು ಯಾವ ವಿಚಾರಕ್ಕಾಗಿ ಗಲಾಟೆ ಮಾಡಿಕೊಂಡಿದ್ದರು. ಯಾರು ಜಗಳವಾಡಿದ್ದರು ಎಂಬಿತ್ಯಾದಿ ಅಂಶಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
ಹರ್ಷ ಅವರ ಕೊಲೆಗೆ ಹಳೆ ದ್ವೇಷ ಕಾರಣವೇ ಅಥವಾ ಬೇರೆ ಕಾರಣವಿರಬಹುದೇ ಎಂಬ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹರ್ಷ ಅವರ ಸ್ನೇಹಿತರು, ನೆರೆಹೊರೆಯವರಿಂದಲೂ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
# ಮೂವರು ವಶಕ್ಕೆ:
ಭಜರಂಗದಳ ಕಾರ್ಯಕರ್ತ ಹರ್ಷ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಇದುವರೆಗಿನ ತನಿಖೆ ಪ್ರಕಾರ, ಕೊಲೆಗೆ ಹಳೆಯ ದ್ವೇಷವೇ ಕಾರಣ ಎಂದು ಕಂಡುಬರುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.
ಶಿವಮೊಗ್ಗದ ಒಂದು ಪೊಲೀಸ್ ತಂಡ ಬೆಂಗಳೂರಿಗೆ ಬಂದಿದ್ದು, ಸ್ಥಳೀಯ ಪೊಲೀಸರ ನೆರವಿನಿಂದ ಜೆಜೆ ನಗರದಲ್ಲಿ ಶಂಕಿತ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಒಂದು ತಂಡ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿಗೆ ಹೋಗಿದ್ದು, ಅಲ್ಲಿನ ಬಳ್ಳಾರಿ ಕ್ಯಾಂಪ್‍ನಲ್ಲಿ ಅಡಗಿ ಕುಳಿತಿದ್ದ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
