ಬೆಂಗಳೂರು,ಆ.16-ಶಿವಮೊಗ್ಗದಲ್ಲಿ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಯುವಕ ಪ್ರೇಮ್ ಸಿಂಗ್‍ಗೆ ಮುಸ್ಲಿಂ ಗೂಂಡಾಗಳೇ ಚಾಕು ಇರಿದಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೇರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಯುವಕರ ನಡುವೆ ಗಲಭೆ ಉಂಟಾಗಿತ್ತು. ಅಮಾಯಕ ಪ್ರೇಮ್ ಸಿಂಗ್‍ಗೆ ರ್ನಿಧಿಷ್ಟ ಸಂಘಟನೆಯೊಂದರ ಮುಸ್ಲಿಂ ಗೂಂಡಾಗಳೇ ಚಾಕು ಇರಿದಿದ್ದಾರೆ ಎಂದು ದೂರಿದರು.
ಈ ಘಟನೆಯಲ್ಲಿ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇದೆ.ಅವರ ಬೆಂಬಲದಿಂದಲೇ ಈ ಗೂಂಡಾಗಳು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಯಾವುದೇ ಸಂಘಟನೆ ಇರಲಿ ಅಥವಾ ಯಾರೇ ಇರಲಿ ಸುಮ್ಮನೆ ಬಿಡಬಾರದು ಎಂದು ಒತ್ತಾಯಿಸಿದರು.
ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಗಲಭೆ ಉಂಟಾದಾಗ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿ ಕಳುಹಿಸಿದ್ದರು. ಏನೂ ಮಾಡದ ಪ್ರೇಮ್‍ಸಿಂಗ್ ಆ ಸ್ಥಳಕ್ಕೆ ಬಂದಾಗ ಕೆಲವು ಗೂಂಡಾಗಳು ಚಾಕು ಇರಿದಿದ್ದಾರೆ. 10 ನಿಮಿಷ ತಡವಾಗಿದ್ದರೆ ಆತ ಬದುಕುತ್ತಿರಲಿಲ್ಲ. ದೇವರು ದೊಡ್ಡವನು ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹೇಳಿದರು.
ನಾನು ಮುಸ್ಲಿಂ ಮುಖಂಡರಲ್ಲಿ ಮನವಿ ಮಾಡುತ್ತೇನೆ. ಕೆಲವು ಯುವಕರು ದಾರಿ ತಪ್ಪಿ ಇಂತಹ ದುಷ್ಕøತ್ಯ ನಡೆಸುತ್ತಾರೆ. ಕೂಡಲೇ ಹಿರಿಯರು ಇಂಥವರನ್ನು ಕರೆದು ಬುದ್ದಿ ಹೇಳಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಯಾರು ಏನೂ ಬೇಕಾದರೂ ಮಾಡಬಹುದೆಂಬ ಪರಿಸ್ಥಿತಿ ನಿರ್ಮಾಣವಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಬೊಮ್ಮಾಯಿ ಅವರ ನಿವಾಸಕ್ಕೆ ಆಗಮಿಸಿದ್ದ ಈಶ್ವರಪ್ಪ, ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪ್ರಮುಖ ಆರೋಪಿಯೊಬ್ಬನು ಈ ಹಿಂದೆ ಗಣಪತಿ ಉತ್ಸವದ ಸಂದರ್ಭದಲ್ಲಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಚಪ್ಪಲಿ ಎಸೆದು ಕೋಮುಗಲಭೆ ಸೃಷ್ಟಿಸಿದ್ದ. ಇಂಥವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಭಜರಂಗದಳದ ಕಾರ್ಯಕರ್ತ ಹರ್ಷನನ್ನು ಕೊಲೆ ಮಾಡಿದ್ದ ದುಷ್ಕರ್ಮಿಗಳೇ ಈಗ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದಿದ್ದಾರೆ. ರ್ನಿಧಿಷ್ಟ ಸಂಘಟನೆಯೊಂದರ ಕಾರ್ಯಕರ್ತರೇ ಪದೇ ಪದೇ ಇಂತಹ ಕೃತ್ಯಗಳನ್ನು ನಡೆಸುತ್ತಾರೆ. ಇವರನ್ನು ಸದೆಬಡೆಯದಿದ್ದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಸಿಎಂಗೆ ಈಶ್ವರಪ್ಪ ಮನವರಿಕೆ ಮಾಡಿಕೊಟ್ಟರು.
ವೀರ್ ಸಾರ್ವಕರ್ ಫ್ಲೆಕ್ಸ್ ಹಾಕಿ ಒಂದು ದಿನದ ನಂತರ ದುರುದ್ದೇಶ ಪೂರ್ವಕವಾಗಿಯೇ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹಾಕಲು ಮುಂದಾಗಿದ್ದಾರೆ. ಇದು ಪೂರ್ವ ನಿಯೋಜಿತ ಕೃತ್ಯವೂ ಹೌದು. ಇದರ ಹಿಂದೆ ಯಾರಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ.
ಈ ಸಂಘಟನೆಯ ಹಿಂದೆ ಇರುವ ಎಲ್ಲರನ್ನು ಗುರುತಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿರುವ ಬೊಮ್ಮಾಯಿ ಅವರು ಈಗಾಗಲೇ ಶಿವಮೊಗ್ಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಸಹಜ ಸ್ಥಿತಿಗೆ ಮರಳಲಿ. ಈ ದುಷ್ಕøತ್ಯದಲ್ಲಿ ಭಾಗಿಯಾಗಿರುವ ಸಮಾಜಘಾತುಕರನ್ನು ಬಿಡುವುದಿಲ್ಲ ಎಂದು ಅಭಯ ನೀಡಿದ್ದಾರೆ.