ಶಿವಮೊಗ್ಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ : ಸಿಎಂ ಬೊಮ್ಮಾಯಿ

Social Share

ಬೆಂಗಳೂರು,ಆ.16- ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಚುರುಕಾಗಿ ತನಿಖೆ ನಡೆಸಿ ವರದಿ ನೀಡಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದರಿಂದಲೆ ಘಟನೆ ನಡೆದು ಒಂದು ದಿನದೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಗೆ ಕಾರಣ ಏನು? ಈ ಕೃತ್ಯದಲ್ಲಿ ಯಾರಿದ್ದಾರೆ? ಎಂಬುದರ ಕುರಿತು ಶೀಘ್ರ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ವರದಿ ನೀಡಬೇಕೆಂದು ಸೂಚಿಸಲಾಗಿದೆ. ಕಾನೂನು ಪ್ರಕಾರ ತನಿಖೆಯಾಗಬೇಕು. ಪ್ರಕರಣದಲ್ಲಿ ಯಾರೇ ಇದ್ದರೂ ಸುಮ್ಮನೆ ಬಿಡುವುದಿಲ್ಲ. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ರಿತ್ಯ ಶಿಕ್ಷೆಯಾಗಲಿದೆ ಎಂದ ಅವರು, ತನಿಖೆ ನಡೆಯುವಾಗ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ಆಡಳಿತ ಕುರಿತಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಅವರ ಜೊತೆ ಮಾತನಾಡಿದ್ದೇನೆ. ಅವರೊಬ್ಬ ಜವಾಬ್ದಾರಿ ಇರುವ ಹಿರಿಯ ಸಚಿವರು ಕೇವಲ ಸರ್ಕಾರಿ ಇಲಾಖೆಯಲ್ಲಿರುವ ಲೋಪದೋಷಗಳ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಹೆಚ್ಚಿನ ಅರ್ಥ ಕಲ್ಪಿಸುವುದು ಬೇಡ ಎಂದು ಸಿಎಂ ಮನವಿ ಮಾಡಿದರು.

Articles You Might Like

Share This Article